ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಕರಕುಶಲ ಕೆಲಸಗಳು, ಟೈಲರಿಂಗ್ ಹಾಗೂ ಅಡಿಕೆ ತಟ್ಟೆಗಳ ತಯಾರಿಕೆ ತರಬೇತಿ ಜೊತೆ ಹೆಚ್ಚಿನ ಅನುದಾನ ನೀಡಿದರೆ ಆರ್ಥಿಕವಾಗಿ ಗ್ರಾಮೀಣ ಮಹಿಳೆಯರು ಅಭಿವೃದ್ಧಿ ಹೊಂದುತ್ತಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಹೇಮರಾಜು ತಿಳಿಸಿದರು.ತಗಡೂರು ಹಾಸ್ಟೆಲ್ ಸಮುದಾಯ ಭವನದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಬಲವರ್ಧನ ಸಂಸ್ಥೆ, ರಂಗನಾಥ ಸ್ವಾಮಿ ಸಂಜೀವಿನಿ ಮಹಿಳಾ ಒಕ್ಕೂಟ ಆಯೋಜಿಸಿದ್ದ 6ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ವರ್ಗಗಳು ಹೆಚ್ಚು ಇರುವ ತಗಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ತರಬೇತಿ ಶಿಬಿರಗಳನ್ನು ಆಯೋಜಿಸಬೇಕು ಈ ಭಾಗದ ಮಹಿಳಾ ಸದಸ್ಯರು ಸ್ವಾವಲಂಬಿಗಳಾಗಲು ಗ್ರಾಮ ಪಂಚಾಯಿತಿಯಿಂದ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.
ರಂಗನಾಥ ಸ್ವಾಮಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೋಭಾ ಭಾರತೀಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಬ್ಸಿಡಿ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಗ್ರಾಮ ಪಂಚಾಯಿತಿ ಮೂಲಕ ಇನ್ನಿತರ ಸೌಲಭ್ಯಗಳನ್ನು ಶ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಈ ಸಾಲ ಸೌಲಭ್ಯಗಳು ಎಲ್ಲಾ ಹಳ್ಳಿ ಸದಸ್ಯರುಗಳಿಗೆ ಪ್ರಾಮಾಣಿಕತೆಯಿಂದ ತಲುಪಿದರೆ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿಯಿಂದ ರಂಗನಾಥ ಸ್ವಾಮಿ ಮಹಿಳಾ ಒಕ್ಕೂಟದ ಕಚೇರಿ ತೆರೆಯಲು ಕೊಠಡಿ ಕೊಡಿಸಬೇಕು ಎಂದು ಅಧ್ಯಕ್ಷರಿಗೆ ಮನವಿ ಮಾಡಿದರು.ತಾಲೂಕು ನೋಡಲ್ ಅಧಿಕಾರಿ ಪುಣ್ಯ ಮಾತನಾಡಿ, ತಗಡೂರು ಪಂಚಾಯಿತಿ ವ್ಯಾಪ್ತಿಯ ಶ್ರೀ ಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಕಂಪ್ಯೂಟರ್, ಟೈಲರಿಂಗ್ ತರಬೇತಿ ಹಾಗೂ ಹಪ್ಪಳ, ಉಪ್ಪಿನಕಾಯಿ ತಯಾರಿಕೆ ಹಾಗೂ ಮಾರಾಟ ಮಾಡುವ ಬಗ್ಗೆ ತರಬೇತಿ ಕೊಡಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ವ್ಯವಸ್ಥಾಪಕ ಪ್ರವೀಣ್, ಒಕ್ಕೂಟದ ಕಾರ್ಯದರ್ಶಿ ಕುಮಾರಿ, ಖಜಾಂಚಿ ರೂಪ, ಎಂ ಬಿ ಕೆ ಭುವನಹಳ್ಳಿ ತನುಜ ಮಧು, ಪಾರ್ವತಿ, ಶ್ರೀ ಶಕ್ತಿ ಸ್ವಸಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು, ಇತರರು ಹಾಜರಿದ್ದರು.