ಮಹಿಳೆ ತನ್ನ ಹಕ್ಕು ರಕ್ಷಣೆಗೆ ಶಿಕ್ಷಣ ಪಡೆಯಬೇಕಿದೆ

KannadaprabhaNewsNetwork |  
Published : Mar 28, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಮಿಡ್ಲ್ 111 | Kannada Prabha

ಸಾರಾಂಶ

ಚಳ್ಳಕೆರೆ ನಗರದ ಎಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ.ದೇವಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಅನಾದಿಕಾಲದಿಂದಲೂ ಮಹಿಳೆಯನ್ನು ಪುರುಷ ಪ್ರಧಾನ ಸಮಾಜ ಶೋಷಣೆಯ ಕೂಪಕ್ಕೆ ತಳ್ಳುತ್ತಲೇ ಬಂದಿದೆ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕುಗಳ ರಕ್ಷಣೆಗೆ ಶಿಕ್ಷಣವನ್ನು ಪಡೆಯಬೇಕಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ಆಯೋಗದ ನ್ಯಾಯಾಧೀಶೆ ಇ.ಪ್ರೇಮಾ ಅಭಿಪ್ರಾಯಪಟ್ಟರು.

ನಗರದ ಎಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲಬದಲಾದಂತೆ ಭಾರತೀಯ ಸಮಾಜ ಮಹಿಳೆಯರನ್ನು ಶೋಷಣೆ ಮಾಡುತ್ತಿರುವುದನ್ನು ತಪ್ಪಿಸಲು ಸಂವಿಧಾನದ ಆಶಯದಂತೆ ಅನೇಕ ಬಿಗಿ ಕಾನೂನುಗಳನ್ನು ಮತ್ತು ಅವಕಾಶಗಳನ್ನು ಕೊಡುತ್ತಾ ಬಂದಿದೆ. ಆದರೆ, ನಮ್ಮನ್ನಾಳುವ ಸರ್ಕಾರಗಳು ಮಾತ್ರ ಮಹಿಳಾ ಮೀಸಲಾತಿ ಜಾರಿಗೆ ಇನ್ನೂ ಮೀನಾಮೇಷ ಎಣಿಸುತ್ತಿರುವುದು ಈ ವ್ಯವಸ್ಥೆಯ ದುರಂತ ಎಂದರು.

ಮಹಿಳೆಯರಿಗೆ ಎಲ್ಲಿ ಅಧಿಕಾರ ಸಿಕ್ಕರೂ ಅಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಪಿತೃ ಪ್ರಧಾನ ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಸಾಧನೆಯ ಶಿಖರವನ್ನು ಮಹಿಳೆ ಏರುತ್ತಿದ್ದಾಳೆ ಎಂದು ಬಣ್ಣಿಸಿದರು.

ವರ್ಷಕ್ಕೊಮ್ಮೆ ಆಚರಣೆ ಮಾಡುವ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರು ಮತ್ತು ಅವರ ಸಾಧನೆಗಳನ್ನು ಹೇಳುವ ಬದಲಾಗಿ ಇನ್ನಷ್ಟು ಉತ್ತೇಜನ ನೀಡಲು, ಶಿಕ್ಷಣ ನೀಡಿ ಉದ್ಯೋಗ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಎಲ್ಲಾ ವಲಯಗಳಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಪ್ರೊ.ಎಂ.ಕೆ. ದೇವಪ್ಪ ಮಾತನಾಡಿ, ಮಹಿಳೆಯರ ಶಿಕ್ಷಣ ಮತ್ತು ಸ್ವಾವಲಂಬನೆಗೆ ಸರ್ಕಾರಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ. ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಹಿಳಾ ಅಭಿವೃದ್ಧಿ ಸಾಧಿಸಬೇಕು ಎಂದರು.

ಪ್ರತಿಯೊಬ್ಬ ಮಹಿಳೆಯೂ ತಮ್ಮ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಬಂದಾಗ ಮಾತ್ರ ಮಹಿಳೆಯರಲ್ಲಿ ಆತ್ಮವಿಶ್ವಾಸ, ಧೈರ್ಯದಿಂದ ತಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.

ಮಹಿಳಾ ದೌರ್ಜನ್ಯ ವಿರೋಧಿ ಘಟಕದ ಸಂಚಾಲಕರಾದ ಪ್ರೊ. ಎ.ಎಂ. ಜಗದೀಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಲಿಂಗ ಅಸಮಾನತೆ ಜೀವಂತವಿದೆ. ಇದು ಆಧುನಿಕ ಸಮಾಜ ಮುಂದುವರಿಯಲು ಅಡ್ಡಿಯಾಗುತ್ತದೆ. ಯಾವ ಸಮಾಜ ಮಹಿಳೆಯರನ್ನು ಸಮಾನವಾಗಿ ಕಾಣುವುದಿಲ್ಲವೋ ಅಂತಹ ಸಮಾಜ ಸಮಾನತೆಯ ನ್ಯಾಯದ ಬಗ್ಗೆ ಮಾತನಾಡಲು ನೈತಿಕತೆ ಕಳೆದುಕೊಂಡಂತೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ಬಿ. ನಾಗಶ್ರಿ, ಜಿ.ಟಿ. ಶಶಿಕಲಾ, ಪ್ರೊ.ಎನ್. ಶಿಲ್ಪಾ, ಪ್ರೊ.ವಿ.ಬಿ. ನಾಗವೇಣಿ, ಪ್ರೊ. ಮಂಜುನಾಥ್, ಪ್ರೊ. ಪೈರೂಜ್, ಪ್ರೊ. ಜೆ.ಆರ್.ಜೆ. ರಾಜ್ ಕುಮಾರ್, ಪ್ರೊ. ಜಗನ್ನಾಥ್, ಪ್ರೊ. ಶಿವಾನಂದಯ್ಯ, ಪ್ರೊ. ವಿಜಯ್ ಕುಮಾರ್, ಪ್ರೊ. ನಾಗರಾಜ್, ಪ್ರೊ. ಧನಂಜಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಗಣತಿ 2027ಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜೆ