ಬಹು ಸಂಸ್ಕೃತಿಯ ದೇಶದಲ್ಲಿ ಐಕ್ಯತೆ ಕೆಡಿಸುವವರ ಬಗ್ಗೆ ಎಚ್ಚರಿಕೆ ಅಗತ್ಯ

KannadaprabhaNewsNetwork | Published : Jan 31, 2024 2:18 AM

ಸಾರಾಂಶ

ಶಾಂತಿ, ಸಹಿಷ್ಣುತೆ ದೇಶದ ಕಿರೀಟಗಳೆಂದು ಮಹಾತ್ಮಗಾಂಧಿ ಬೋಧಿಸಿದರೂ ಗೂಡ್ಸೆಯ ಸಂತತಿ ಇಂದಿಗೂ ದೇಶದಲ್ಲಿದ್ದು ಸಕಲರಿಗೆ ಆಶ್ರಯ ನೀಡಿದ ದೇಶದಲ್ಲಿ ಒಂದೇ ಸಂಸ್ಕೃತಿ, ಭಾಷೆ ತರುವ ಧಾವಂತದಲ್ಲಿ ದೇಶ ವಾಸಿಗಳು ಎಚ್ಚರಿಕೆ ವಹಿಸಬೇಕು. ಈ ದೇಶದ ರಾಜಕಾರಣಿಗಳಿಗೆ ವಿದೇಶಕ್ಕೆ ತೆರಳಿದಾಗ ಮಾತ್ರ ಮಹಾತ್ಮಗಾಂಧಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ನೆನಪಾಗುತ್ತಾರೆ

ಗಂಗಾವತಿ: ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸರ್ಕಾರಗಳು ರಚನೆಯಾಗುತ್ತವೆ. ಅಧಿಕಾರದಲ್ಲಿರುವವರು ಸಕಲ ಧರ್ಮದವರನ್ನು ಪ್ರೀತಿಯಿಂದ ಕಾಣಬೇಕು. ಬಹುಸಂಸ್ಕೃತಿಯ ದೇಶದಲ್ಲಿ ಸೌಹಾರ್ದತೆ ಕೆಡಿಸುವವರನ್ನು ಖಂಡಿಸಬೇಕೆಂದು ಶರಣ ಸಾಹಿತಿ, ನಿವೃತ್ತ ಶಿಕ್ಷಕ ಸಿ.ಎಚ್. ನಾರಿನಾಳ ಹೇಳಿದರು.

ಅವರು ನಗರದ ಜಗಜೀವನರಾಮ್‌ ವೃತ್ತದಲ್ಲಿ ಮಹಾತ್ಮಗಾಂಧಿ ಪುಣ್ಯಸ್ಮರಣೋತ್ಸವದ ನಿಮಿತ್ತ ಸೌಹಾರ್ದ ಕರ್ನಾಟಕ ಸ್ಥಳೀಯ ಘಟಕ ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಹಾಗೂ ಬಹುರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾತ್ಮಗಾಂಧಿ ಶ್ರೇಷ್ಠ ಮಾನವೀಯ ಮೌಲಗಳುಳ್ಳ ವ್ಯಕ್ತಿಯಾಗಿದ್ದರು.ಯಾವುದೇ ಅಧಿಕಾರ ಬಯಸದ ವಿಶ್ವ ಮಾನವರಾಗಿದ್ದರು. ಅವರು ಮರಣ ಹೊಂದಿದ ದಿನದಂದು ವಿಶ್ವದ ೧೫೫ ಕ್ಕೂ ಹೆಚ್ಚು ದೇಶಗಳು ಅರ್ಧಕ್ಕೆ ಧ್ವಜ ಏರಿಸುವ ಮೂಲಕ ಗೌರವ ಸೂಚಿಸಿದ್ದವು. ದೇಶದ ಮತಾಂಧ ಸಂಘಟನೆಗಳು ಮಹಾತ್ಮ ಗಾಂಧಿಯವರನ್ನು ಕೊಲ್ಲಿಸುವ ಮೂಲಕ ಕೌರ್ಯ ಮೆರೆದಿವೆ. ಶಾಂತಿ, ಸಹಿಷ್ಣುತೆ ದೇಶದ ಕಿರೀಟಗಳೆಂದು ಮಹಾತ್ಮಗಾಂಧಿ ಬೋಧಿಸಿದರೂ ಗೂಡ್ಸೆಯ ಸಂತತಿ ಇಂದಿಗೂ ದೇಶದಲ್ಲಿದ್ದು ಸಕಲರಿಗೆ ಆಶ್ರಯ ನೀಡಿದ ದೇಶದಲ್ಲಿ ಒಂದೇ ಸಂಸ್ಕೃತಿ, ಭಾಷೆ ತರುವ ಧಾವಂತದಲ್ಲಿ ದೇಶ ವಾಸಿಗಳು ಎಚ್ಚರಿಕೆ ವಹಿಸಬೇಕು. ಈ ದೇಶದ ರಾಜಕಾರಣಿಗಳಿಗೆ ವಿದೇಶಕ್ಕೆ ತೆರಳಿದಾಗ ಮಾತ್ರ ಮಹಾತ್ಮಗಾಂಧಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ನೆನಪಾಗುತ್ತಾರೆ. ಮರಳಿ ದೇಶಕ್ಕೆ ಆಗಮಿಸಿದ ನಂತರ ಜಾತಿ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕಾರ್ಯ ನಿರಂತರವಾಗಿದ್ದು ಜನತೆ ಬಹಳ ಎಚ್ಚರಿಕೆ ವಹಿಸಬೇಕು. ಬುದ್ಧಿವಂತರು, ದೇಶಾಭಿಮಾನಿಗಳು ಮೌನಿಯಾದರೆ ದುಷ್ಟರು ಅಧಿಕಾರಕ್ಕೆ ಬಂದು ದೇಶದ ಐಕ್ಯತೆ, ಸೌಹಾರ್ದತೆ ಕೆಡಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಚಾರ ಮಾಡುವ ಸಂಭವವಿದ್ದು ಪ್ರತಿ ಮನೆಗೂ ಸೌಹಾರ್ದತೆಯ ಸಂದೇಶ ರವಾನೆ ಮಾಡಬೇಕಿದೆ. ಆದ್ದರಿಂದ ಮಹಾತ್ಮಗಾಂಧಿ ಪುಣ್ಯ ಸ್ಮರಣೆಯ ನಿಮಿತ್ತ ಜನಸಾಮಾನ್ಯರು, ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ ಮೂಡಿಸಲು ರಾಜ್ಯವ್ಯಾಪಿ ಸೌಹಾರ್ದತಾ ನಡಿಗೆ ಮತ್ತು ಮಾನವ ಸರಪಳಿಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಯತ್ನ ನಡೆಸಲಾಗಿದೆ. ಮಹಾತ್ಮಗಾಂಧಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಮಾದರಿ ಅಳವಡಿಸಿಕೊಳ್ಳುವ ಮೂಲಕ ಜಾತ್ಯತೀತ ಮೌಲ್ಯ ಉಳಿಸೋಣ ಎಂದರು.

ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ಜೆ. ಭಾರದ್ವಾಜ್, ಅಜಮೀರ್ ನಂದಾಪೂರ, ಹೊಸ್ಕೇರಿ ಚಂದ್ರಪ್ಪ, ಶೈಲಜಾ ಹಿರೇಮಠ, ಹನುಮಂತಪ್ಪ ಗಿಡ್ಡಿ, ರಮೇಶಗಬ್ಬೂರು,ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ನಿರುಪಾದಿ ಬೆಣಕಲ್, ಸಿರಾಜ್ ಸಿದ್ದಾಪೂರ, ಅಮರೇಶ ಕಡಗದ್, ಗ್ಯಾನೇಶ ಕಡಗದ್, ಕಾಶಿಂ ಅಲಿ ಮುದ್ದಾಬಳ್ಳಿ, ಮಹಮದ್ ರಫಿ, ಶೇಖ ನಬಿ, ಯುನೂಸ್, ಹುಸೇನಪ್ಪ, ಎ.ಕೆ.ಮಹೇಶಕುಮಾರ ಭಾಗವಹಿಸಿದ್ದರು.

Share this article