ಪ್ರಸ್ತುತ ಸಮಾಜದಲ್ಲಿನ ಮಹಿಳಾ ಶೋಷಣೆಗಳು ಹಾಗೂ ಶೋಷಣೆ ವಿರುದ್ಧ ಹೋರಾಡುವ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಆಗಬೇಕಾಗಿದೆ.
ಕನ್ನಡಪ್ರಭ ವಾರ್ತೆ ಹೊನ್ನಾವರ
ಪ್ರಸ್ತುತ ಸಮಾಜದಲ್ಲಿನ ಮಹಿಳಾ ಶೋಷಣೆಗಳು ಹಾಗೂ ಶೋಷಣೆ ವಿರುದ್ಧ ಹೋರಾಡುವ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಆಗಬೇಕಾಗಿದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಸಹನಾ ಭಾನು ಪಠಾಣ ಹೇಳಿದರು.
ಪಟ್ಟಣದ ಪ್ರಭಾತ್ ನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದ ಮಹಿಳೆಯರು ಜಾಗೃತರಾಗಿ ಸಮಾಜದ ಬದಲಾವಣೆಗೆ ಕಾರಣಿಕರ್ತರಾಗಬೇಕೆಂದು ಕರೆ ನೀಡಿದರು.
ಶಿಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ತ್ಯಾಗ, ಪ್ರೀತಿ, ಧೈರ್ಯ ಮತ್ತು ಶಕ್ತಿ ಸಂಕೇತವಾಗಿ ಕೆಲಸ ನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣಿಗೆ ಗೌರವ, ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಶಿಕ್ಷಕ ಸಂಘವು ಮಹಿಳೆಯರ ಧ್ವನಿಯಾಗಿ ಕೆಲಸ ನಿರ್ವಹಿಸಿ ಜಿಲ್ಲೆಗೆ ಮಾದರಿಯಾಗಿರುತ್ತದೆ. ಐದು ಜನ ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸಿರುವುದು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕ್ಷೇತ್ರ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ ಮಾತನಾಡಿ, ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ. ದೇವರ ರೂಪದಲ್ಲಿ ಹೆಣ್ಣನ್ನು ಪೂಜಿಸುವ ಮತ್ತು ಅತ್ಯುನ್ನತ ಸ್ಥಾನ ನೀಡುವ ದೇಶ ನಮ್ಮದಾಗಿದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶುಭಾ ಸಭಾಹಿತ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ಅವಕಾಶ ನಮಗಾಗಿ ಕಾಯುವುದಿಲ್ಲ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮುನ್ನಡೆದರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಉತ್ತರ ಕನ್ನಡ ಜಿಲ್ಲಾ ಮಹಿಳಾ ನೌಕರರ ಸಂಘದ ಕಾರ್ಯದರ್ಶಿ ಉಷಾ ನಾಯಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ನಾಯ್ಕ, ಶಿಕ್ಷಕ ಸಂಘದ ಕಾರ್ಯದರ್ಶಿ ಕೆ. ಎಂ. ಹೆಗಡೆ, ಸಾಧನ ಬರ್ಗಿ ಮಾತನಾಡಿದರು.
ಸಭೆಯಲ್ಲಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ, ಶಿಕ್ಷಕ ಸಂಘದ ಪ್ರತಿನಿಧಿ ಗೌರಿ ಭಟ್, ಎಂ.ಡಿ. ನಾಯ್ಕ, ಜಿ.ಎಸ್. ಲೋಪೀಸ್ ಮುಂತಾದವರಿದ್ದರು.
ಇದೇ ಸಂದರ್ಭ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ತಾಲೂಕಿನ ಐದು ಜನ ಮಹಿಳಾ ಸಾಧಕರಾದ ಮೇಬಲ್ ಡಿಕೋಸ್ಟ, ನಸೀಮಾ, ಚಂದ್ರವಾಗಿ ನಾಯ್ಕ, ಸವಿತಾ ಭಟ್, ವಿಜಯಾ ಪೈರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಶಿಕ್ಷಕ ಸಂಘದ ಪ್ರತಿಮಾ ಹೆಗಡೆ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಸಂಘದ ಶಾರದಾ ಹೆಗಡೆ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.