ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹೆಣ್ಣು ಬಗೆಗಿನ ತಾತ್ಸರ ಹೋಗಬೇಕು. ಗಂಡು ಮಗುವೇ ಬೇಕು ಎಂಬ ಮನೋಭಾವ ಬದಲಾಗಬೇಕು. ಈ ಕುರಿತು ಜಾಗೃತಿ ಮೂಡಿಸುವ ಅವಶ್ಯವಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಇನ್ನೂ ಹೆಣ್ಣು ಮಕ್ಕಳ ಬಗ್ಗೆ ಇರುವ ತಾತ್ಸಾರವನ್ನು ನಿವಾರಿಸಬೇಕಿದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇತರೆ ಉನ್ನತ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ. ಮಹಿಳೆ ಪುರುಷರಷ್ಟೇ ಸರಿ ಸಮಾನವಾಗಿ ಎಲ್ಲಾ ರಂಗದಲ್ಲೂ ಮುಂದಿದ್ದಾರೆ ಎಂದರು.
ಹೆಣ್ಣು ಮಗು ಜನಿಸಿದರೆ ನಿರಾಸೆ ಪಡುವುದು ಬೇಡ. ಗಂಡು ಮಕ್ಕಳೇ ಜನಿಸಬೇಕೆಂಬ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಹೆಣ್ಣು ಬಗೆಗಿನ ನಿರ್ಲಕ್ಷ್ಯ ತಾತ್ಸಾರ ಬದಲಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಪರಿಣಾಮಕಾರಿಯಾದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ತಿಳಿಸಿದರು.ಇಂದು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿದ್ದೇನೆ. ರೋಗಿಗಳೊಂದಿಗೆ, ಮಹಿಳೆಯರೊಂದಿಗೆ ಮಾತನಾಡಿದ್ದೇನೆ. ವೈದ್ಯರು ಮತ್ತು ಶುಶ್ರೂಷಕರ ಸೇವೆ ಸಮರ್ಪಕವಾಗಿದೆ. ಆದರೆ ಆಸ್ಪತ್ರೆಯಲ್ಲಿ ಬಿಸಿನೀರು ಪೂರೈಕೆ ಆಗದಿರುವ ಕುರಿತು ಸಮಸ್ಯೆ ಹೇಳಿಕೊಂಡಿದ್ದಾರೆ. ವಿಶೇಷವಾಗಿ ಹೆರಿಗೆಯಾದಾಗ ಬಾಣಂತಿಯರಿಗೆ ಬಿಸಿನೀರಿನ ಅವಶ್ಯಕತೆ ಇರುತ್ತದೆ. ಈ ಸೌಲಭ್ಯವನ್ನು ಯಾವುದೇ ದೂರುಗಳು ಬಾರದಂತೆ ಒದಗಿಸಲು ಸೂಚಿಸಲಾಗಿದೆ. ಕುಡಿಯಲು ಬಿಸಿ ನೀರು ಕಾಯಿಸುವ ಸಾಧನವು ಆಸ್ಪತ್ರೆಯಲ್ಲಿದ್ದು ರೋಗಿಗಳ ಅವಲಂಬಿತರಿಗೆ ಇದನ್ನು ಬಳಸಿಕೊಳ್ಳಲು ತಿಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.
ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದ ನಂತರ ಆಸ್ಪತ್ರೆಗಳಲ್ಲಿ ಅತಿ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ಚಿಕಿತ್ಸೆ, ಶುಚಿತ್ವ, ಔಷದೋಪಚಾರಗಳ ಬಗ್ಗೆ ವಿಶೇಷವಾದ ಗಮನ ತೆಗೆದುಕೊಳ್ಳಲಾಗಿದೆ. ಎಲ್ಲಿಯೂ ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟಾಗಿ ಸೇವೆ ಒದಗಿಸಲಾಗುತ್ತಿದೆ. ಇಲ್ಲಿ ಆಸ್ಪತ್ರೆಯಲ್ಲಿಯೂ ತಿಂಗಳಿಗೆ 100 ರಿಂದ 125 ಹೆರಿಗೆಗಳು ಆಗುತ್ತಿವೆ. ರೇಡಿಯಲಾಜಿಸ್ಟ್, ನರ್ಸ್‌ಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗಮನ ಹರಿಸಲಿದ್ದೇವೆ ಎಂದು ಡಾ. ನಾಗಲಕ್ಷ್ಮೀ ಚೌಧರಿ ಅವರು ತಿಳಿಸಿದರು.ಇದಕ್ಕೂ ಮೊದಲು ಆಸ್ಪತ್ರೆಯ ಪ್ರತೀ ವಿಭಾಗಗಳಿಗೂ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷರು ರೋಗಿಗಳು ಮತ್ತು ಅವರ ಅವಲಂಬಿತರೊಂದಿಗೆ ಮಾತನಾಡಿದರು. ಆಸ್ಪತ್ರೆಯಲ್ಲಿ ಹೇಗೆ ಸೇವೆ ಲಭಿಸುತ್ತಿದೆ. ಔಷಧಗಳನ್ನು ಹೊರಗಡೆಯಿಂದ ತರಲು ಚೀಟಿ ನೀಡುತ್ತಿದ್ದಾರೆಯೇ, ಏನಾದರೂ ತೊಂದರೆಗಳು ಇವೆಯೇ ಎಂದು ಪ್ರಶ್ನಿಸಿದರು. ಆಸ್ಪತ್ರೆ ಭೇಟಿಗೂ ಮೊದಲು ಅಧ್ಯಕ್ಷರು ಪಟ್ಟಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಇತರೆ ಸಂಘಟನೆಗಳ ಮುಖಂಡರಿಂದ ಅಹವಾಲುಗಳನ್ನು ಆಲಿಸಿದರು.
ಜಿಪಂ ಸಿಇಒ ಮೋನಾ ರೋತ್, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಲೋಕೇಶ್ವರಿ, ಇತರರು ಈ ಸಂದರ್ಭದಲ್ಲಿ ಇದ್ದರು.24ಸಿಎಚ್ಎನ್52
ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.