ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಿ: ನ್ಯಾ.ಮಂಜುನಾಥ ನಾಯಕ್

KannadaprabhaNewsNetwork |  
Published : Jul 25, 2025, 12:30 AM IST
ಪೊಟೊ: 24ಎಸ್‌ಎಂಜಿಕೆಪಿ01ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಕುರಿತಾದ ಕರಪತ್ರ ಅಂಟಿಸಿದರು. | Kannada Prabha

ಸಾರಾಂಶ

ಪೊಲೀಸರು ಮನೆಗೆ ಬರುವುದು, ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಯಾರೂ ಅಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದ್ದು ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪೊಲೀಸರು ಮನೆಗೆ ಬರುವುದು, ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಯಾರೂ ಅಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದ್ದು ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ತಿಳಿಸಿದರು.

ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಮನೆ ಮನೆಗೆ ಪೊಲೀಸ್’ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು ಎಂದರು.

ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಇರುವ ಹೆದರಿಕೆ ತೊಲಗಬೇಕು. ಈ ಯೋಜನೆಯಡಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸುವುದು ಸ್ವಾಗತಾರ್ಹ. ಮನೆಗಳಿಗೆ ಭೇಟಿ ನೀಡುವ ವೇಳೆ ಸಮವಸ್ತ್ರ ಧರಿಸದಿದ್ದರೆ ಉತ್ತಮ ಹಾಗೂ ಮಕ್ಕಳೊಂದಿಗೆ ಸ್ನೇಹದಿಂದ ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಲಹೆ ನೀಡಿದ ಅವರು, ಜನರ ಮಾತನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಬೇಕು ಎಂದರು.

ಸಾರ್ವಜನಿಕರು ಕೂಡ ಪೊಲೀಸರು ನೀಡುವ ಸಲಹೆ ಸೂಚನೆಗಳನ್ನು ಹಾಗೂ ನಿಯಮಗಳನ್ನು ಪಾಲಿಸುವ ಮೂಲಕ ಅವರೊಂದಿಗೆ ಸಹಕರಿಸಬೇಕು. ಈ ವಿನೂತನ ಕಾರ್ಯಕ್ರಮ ಬಹಳಷ್ಟು ಯಶಸ್ವಿಯಾಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಪೊಲೀಸರು ಎಂದರೆ ಮೊದಲಿನಿಂದಲೂ ಒಂದು ರೀತಿಯ ಭಯ ಮತ್ತು ಅಸಡ್ಡೆ ಇದೆ. ಇದಕ್ಕೆ ಕಾರಣ ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ ಬ್ರಿಟಿಷರು ಜನರ ಮೇಲೆ ನಿಯಂತ್ರಣ ಸಾಧಿಸಲು ಅನುಸರಿಸುತ್ತಿದ್ದ ಕ್ರಮ. ಈ ಬ್ರಿಟಿಷ್ ಲೆಗೆಸಿ ಭಯ ಈಗಲೂ ಇದೆ. ಇದನ್ನು ಹೋಗಲಾಡಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಒಡನಾಟ ಇರುವವರಲ್ಲಿ ಈ ವ್ಯವಸ್ಥೆ ಬಗ್ಗೆ ಶೇ.90 ರಷ್ಟು ಉತ್ತಮ ಪ್ರತಿಕ್ರಿಯೆ ಇದೆ. ಅದೇ ಈ ರೀತಿ ಸಿನೆಮಾ ಮತ್ತು ಸೀರಿಯಲ್‌ನಲ್ಲಿನ ಪೊಲೀಸ್ ವ್ಯವಸ್ಥೆ ನೋಡಿದವರಲ್ಲಿ ಪೊಲೀಸ್ ಇಲಾಖೆ ಬಗ್ಗೆ ಕೆಟ್ಟ ಅಭಿಪ್ರಾಯವೂ ಸಾಕಷ್ಟಿದೆ ಎಂದರು. ಈ ಮುಂಚೆಯೂ ಬೀಟ್ ಮತ್ತು ಸಬ್ ಬೀಟ್ ವ್ಯವಸ್ಥೆ ಇತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿನ ಮೈಕ್ರೊ ಲೆವೆಲ್‌ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಲು ಇಲಾಖೆ ನಗರ ಪ್ರದೇಶದಲ್ಲಿ ಮೊಹಲ್ಲಾ ಸಭೆ, ಗ್ರಾಮಗಳಲ್ಲಿ ಬೀಟ್ ಮಾಡುತ್ತಲಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಶುರುವಾಗಿದೆ ಎಂದು ತಿಳಿಸಿದರು.

ಈ ಯೋಜನೆಯನ್ವಯ 50-60 ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಓಣಿ ಓಣಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಭದ್ರತೆ, ಸುರಕ್ಷತೆ, ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಪ್ರತಿ ತಿಂಗಳ 2ನೇ ಶನಿವಾರದಂದು ಆಯಾ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಕುರಿತಾದ ಕರಪತ್ರ, ಬೀಟ್ ಬುಕ್ ಬಿಡುಗಡೆ ಮಾಡಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ, ರಾಮಣ್ಣ ಶೆಟ್ಟಿ ಗಣಪತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಇತರೆ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ