ಕನ್ನಡಪ್ರಭ ವಾರ್ತೆ ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡ ಮಹಿಳಾ ಸಾಂಸ್ಕೃತಿಕ ಹಬ್ಬ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿನಿಯರು ಹುಮ್ಮಸ್ಸಿನಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರಮೇಳ, ಸ್ಪರ್ಧೆ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಗಳಿಗೆ ಮೆರಗು ನೀಡಿದರು.
ವಿವಿ ಅಂಗಳದಲ್ಲಿ ಆಹಾರ ಮೇಳಕ್ಕೆ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ ಚಾಲನೆ ನೀಡಿದರು. ಈ ಮೇಳದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿನಿಯರು ತಮ್ಮ ಮಳಿಗೆಗಳನ್ನು ಹಾಕಿಕೊಂಡು ಬಿಸಿಲಿನ ಬೇಗೆ ಇಳಿಸುವ ತಂಪು ಲಿಂಬು ಪಾನಿಯ, ಮಸಾಲಾ ಮಜ್ಜಿಗೆ, ರಾಗಿ ಅಂಬಲಿ, ಫ್ರೂಟ್ ಸಲಾಡ್, ಸೇರಿ ತರಹೇವಾರಿ ಖ್ಯಾದ್ಯಗಳನ್ನು ಮಾರಾಟ ಮಾಡಿದರು. ಜನರು ಆಹಾರ ವಿವಿಧ ತಿಂಡಿಗಳನ್ನು ಸವಿದು ಆನಂದಿಸಿದರು.
ಜ್ಞಾನದಾಸೋಹ ಕಾರ್ಯಾಗಾರವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ಹಲವಾರು ವಿಷಯಗಳ ಕುರಿತು ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದಲ್ಲಿ ಆಸಕ್ತಿ ತೋರಿದ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿ ಕೌಶಲ್ಯ ವೃದ್ಧಿ ಮಾಡಿಕೊಂಡರು. ಈ ವೇಳೆ ಪುಸ್ತಕ ಮಳಿಗೆ, ಬಟ್ಟೆ ಮಳಿಗೆ, ಮತ್ತು ಮಹಿಳೆಯರ ಅಂದವನ್ನು ಹೆಚ್ಚಿಸುವ ವಿವಿಧ ಬಗೆಯ ಆಭರಣ, ಬಟ್ಟೆಗಳು ಮಹಿಳೆಯರ ಕಣ್ಮನ ಸೆಳೆಯುವಂತಿದ್ದವು. ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯಕಾರಿಯಾಗುವ ಸಸಿಗಳನ್ನು ಕೂಡ ಈ ಮೇಳದಲ್ಲಿ ಇಟ್ಟಿದ್ದು ವಿಶೇಷ.ಮಹಿಳಾ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮಗಳನ್ನು ಸಮಿತಿಯ ಸದಸ್ಯೆ ಸಂಚಾಲಕಿ ಪ್ರೊ.ಲಕ್ಷ್ಮಮ್ಮದೇವಿ ವೈ, ಮಹಿಳಾ ಅಧ್ಯಯನ ವಿಭಾಗದ ತಂಡ ಹಾಗೂ ವಿವಿಧ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್. ಚಂದ್ರಶೇಖರ ನಿರ್ವಹಿಸಿದರು.