ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಪೌರಕಾರ್ಮಿಕರು ತಮ್ಮ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪ್ರಗತಿಪರ ಚಿಂತಕಿ ಡಾ. ಶೋಭಾರಾಣಿ ಅಭಿಪ್ರಾಯಪಟ್ಟರು.ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಪಟ್ಟಣದ ಶ್ರೀ ದೇವರಾಜ ಅರಸು ಕಲಾ ಭವನದಲ್ಲಿ ಶುಕ್ರವಾರ ಮಹಿಳಾ ಪೌರಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಹಾಗೂ ಯುಗಾದಿ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಹಗಲಿರಳು ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳಾ ಪೌರಕಾರ್ಮಿಕರು ತಮ್ಮ ಜೀವನದ ಬಗ್ಗೆಯೂ ಹೆಚ್ಚಿನ ಗಮನಹರಿಸಬೇಕಿದೆ. ಸ್ವಚ್ಛತೆ ಮಾಡಬೇಕು ಎಂಬುದು ಎಲ್ಲರ ಹೊಣೆಗಾರಿಕೆಯಾಗಬೇಕಿದೆ, ನಮ್ಮ ದೇಶದಲ್ಲಿ ಕೇವಲ ಒಂದೇ ವರ್ಗದ ಜನ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಅಮೂಲ್ಯವಾದ ಬದಲಾವಣೆ ಆಗಬೇಕಿದೆ ಎಂದರು.ಪೌರಕಾರ್ಮಿಕ ವೃತ್ತಿ ಈ ಪೀಳಿಗೆಗೆ ಕೊನೆಯಾಗಬೇಕು ನಿಮ್ಮ ಮಕ್ಕಳು ಮತ್ತು ಕುಟುಂಬ ವರ್ಗಕ್ಕೆ ಉತ್ತಮ ಶಿಕ್ಷಣ, ಉದ್ಯೋಗ ಕೊಡಿಸುವ ಮೂಲಕ ಈ ನಿಮ್ಮ ವೃತ್ತಿ ಕೊನೆಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ನಾವು ಒಮ್ಮೆ ಭೇಟಿ ನೀಡಿ ನೋಡಿದರೆ ಅಲ್ಲಿನ ಪರಿಸ್ಥಿತಿ ಏನೆಂಬುದು ನಮಗೆ ಅರಿವಾಗುತ್ತದೆ, ನಾವು ಬಳಸಿ ಉಪಯೋಗಿಸಿದ ತ್ಯಾಜ್ಯ ವಸ್ತುಗಳನ್ನು ಪೌರಕಾರ್ಮಿಕರು ಬರಿ ಕೈಯಿಂದ ವಿಂಗಡನೆ ಮಾಡುತ್ತಾರೆ ಎಂದರೆ ನಮ್ಮ ಮನ ಕಲಕುವಂತಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಚ್ಛತೆ ಮತ್ತು ತ್ಯಾಜ್ಯ ವಸ್ತುಗಳ ವಿಂಗಡಣೆ ಪ್ರತಿ ಮನೆ ಮನೆಯಲ್ಲಿ ಆಗಬೇಕು, ಯಂತ್ರೋಪಕರಣಗಳನ್ನು ಬಳಸೋಣ ನಮ್ಮ ನಮ್ಮ ಮನೆ, ಬೀದಿಗಳನ್ನು ನಾವೇ ಸ್ವಚ್ಛ ಮಾಡಬೇಕು ಎನ್ನುವ ಪರಿಕಲ್ಪನೆ ಪ್ರತಿಯೊಬ್ಬ ನಾಗರಿಕರಲ್ಲೂ ಬರಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ತಾರತಮ್ಯ ಕಂಡು ಬರುತ್ತಿದೆ, ಸ್ಥಳೀಯ ಸಂಸ್ಥೆಗಳು ಘನ ತ್ಯಾಜ್ಯ ವಿಲೇವಾರಿಗಾಗಿ ಪೌರಕಾರ್ಮಿಕರಿಗೆ ಉತ್ತಮ ಪರಿಕರಗಳನ್ನು ನೀಡಬೇಕಿದೆ ಎಂದರು.
ಪೌರಕಾರ್ಮಿಕರನ್ನು ಯಾವ ರೀತಿ ಗೌರವಿಸಬೇಕು ಎಂಬುದನ್ನು ನಮ್ಮ ಮಕ್ಕಳಿಗೆ ನಾವು ಹೇಳಿಕೊಡಬೇಕು, ಒಂದು ಸಮೀಕ್ಷೆಯ ಪ್ರಕಾರ ಶೇ. 42 ರಷ್ಟು ಪೌರಕಾರ್ಮಿಕರು ಸಂಧಿವಾತ ತೊಂದರೆಯಿಂದ ಬಳಲುತ್ತಿದ್ದಾರೆ. ಪೌರಕಾರ್ಮಿಕರು ಮಧ್ಯಪಾನ, ತಂಬಾಕು ಸೇವನೆಯಂತಹ ದುಶ್ಚಟಗಳಿಂದ ದೂರವಿರಬೇಕು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಕತಾರ್ ದೇಶದ ಕನ್ನಡ ಸಾಂಸ್ಕೃತಿಕ ರಾಯಭಾರಿ ಸುಮಾ ಮಹೇಶ್ ಮಾತನಾಡಿ, ಸಮಾಜದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕ ಮಹಿಳೆಯರು ಸಮಾಜಕ್ಕೆ ನೀಡುತ್ತಿರುವ ಸೇವೆಯು ಅಮೂಲ್ಯವಾದದು ಎಂದರು.
ಮಹಿಳೆಯರ ಶಕ್ತಿ ಮತ್ತು ಸ್ಫೂರ್ತಿಯ ಬಗ್ಗೆ ಯೋಚನೆ ಮಾಡಿದಾಗ ಭಾರತೀಯ ಮಹಿಳೆಯರು ಹೆಚ್ಚಿನ ಶಕ್ತಿ ಉಳ್ಳವರಾಗಿದ್ದಾರೆ. ಇತ್ತೀಚೆಗೆ ಚಂದ್ರಯಾನ ನಡೆಸಿ ಬಂದ ಭಾರತೀಯ ಮೂಲದವರೇ ಆದ ಸುನೀತಾ ವಿಲಿಯಮ್ಸ್ ಭಾರತೀಯರ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು.ಒಕ್ಕಲಿಗ ಯುವ ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷ ನಂಜುಂಡ ನಂಜೇಗೌಡ ಮಾತನಾಡಿ, ಅನ್ನ, ಅಕ್ಷರ ಮತ್ತು ಉದ್ಯೋಗದ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ವಿಶ್ವದ 28ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ರೈತ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಎಂಟು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರತಿ ವರ್ಷ 3000 ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮೈಸೂರಿನ ಸಕ್ಷಮ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಆರ್. ಶೈಲಜಾ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯೆ ಡಾ. ಶೋಭಾ ಮಾತನಾಡಿದರು. ಎಸ್ಐ ನವ್ಯಾ, ಚುಂಚಶ್ರೀ ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಷಾ ಗಿರೀಶ್, ಉಪನ್ಯಾಸಕ ನಂಜುಂಡಸ್ವಾಮಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆನಂದ್, ಸುಷ್ಮಾ ಮೋಹನ್, ಶುಭಾಗೌಡ, ಶ್ರೀನಿವಾಸ್ ಇದ್ದರು.