- ಜಿಲ್ಲಾಡಳಿತ ನೇತೃತ್ವದಲ್ಲಿ ಮಹಿಳಾ ದಿನ-2026 ಕಾರ್ಯಕ್ರಮ । ಜೀವನಶೈಲಿ ಬದಲಾವಣೆ ಮುಖ್ಯ: ಡಾ.ಸಮೃದ್ಧಿ- - -
ಮಹಿಳಾ ಸಬಲೀಕರಣ ಕೇವಲ ಭಾಷಣ, ಅಂಕಿ ಅಂಶಗಳಿಗಷ್ಟೇ ಸೀಮಿತವಾಗದೇ, ಸಮಾಜದ ಕಟ್ಟಕಡೆಯ ಮಹಿಳೆಯರೂ ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ಹೀಗೆ ಸ್ವತಂತ್ರರಾದಾಗ ಮಾತ್ರವೇ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ನಬಾರ್ಡ್‌ನಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಪ್ರಕೃತಿ ಸಹಜವಾಗಿಯೇ ಮಹಿಳೆಯರಲ್ಲಿ ಅಪ್ರತಿಮ ಶಕ್ತಿ, ತಾಳ್ಮೆ ಇರುತ್ತದೆ. ಮಹಿಳೆಯರು ಮೊದಲು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. 9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಎಚ್‌ಪಿವಿ ಲಸಿಕೆ ಪ್ರತಿಯೊಬ್ಬ ಪಾಲಕರೂ ತಪ್ಪದೇ ಕೊಡಿಸಬೇಕು. ಇದು ಮಹಿಳೆಯರ ಭವಿಷ್ಯದ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಅವಶ್ಯಕ ಎಂದು ಹೇಳಿದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿರುವುದು ಐತಿಹಾಸಿಕ ಹೆಜ್ಜೆ. ಆಡಳಿತದ ವಿವಿಧ ಹಂತಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾನತೆಯ ಸಂಕೇತವಾಗಿದೆ. ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ಪ್ರೋತ್ಸಾಹಿಸಿ, ಮೇಲೆತ್ತುವ ಕೆಲಸ ಮಾಡಬೇಕು. ನಾವು ಬಿತ್ತಿದ ಮೌಲ್ಯಗಳೇ ಮುಂದೆ ದೊಡ್ಡ ಮರವಾಗಿ ಸಮಾಜಕ್ಕೆ ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ವೈದ್ಯೆ ಡಾ.ಸಮೃದ್ಧಿ ಗಿತ್ತೆ ಮಾಧವ ಮಾತನಾಡಿ, ನಮ್ಮ ಜೀವನದಲ್ಲಿ ಜೀವನಶೈಲಿಯ ಬದಲಾವಣೆಗಳು ಅಗತ್ಯ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ, ಹಣ್ಣುಗಳನ್ನು, ಬೇಸಿಗೆಯಲ್ಲಿ ಮಾವು, ದ್ರಾಕ್ಷಿ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬೇಕು. ಆಹಾರದಲ್ಲಿ ದ್ವಿದಳ ಧಾನ್ಯಗಳು, ಮೊಟ್ಟೆ ಮತ್ತು ಸೋಯಾಬೀನ್ ಸೇರಿಸುವುದು ಒಳ್ಳೆಯದು ಎಂದು ಆರೋಗ್ಯ ರಕ್ಷಣೆ ಕುರಿತು ವಿವರಿಸಿದರು.
- - -
- - -
ದಾವಣಗೆರೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026 ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಡಾ.ಸಮೃದ್ಧಿ ಗಿತ್ತೆ ಮಾಧವ ಅವರನ್ನು ಸನ್ಮಾನಿಸಲಾಯಿತು.