ಮಹಿಳಾ ಸಬಲೀಕರಣ ಯೋಗ ದಿನ ಉದ್ದೇಶ: ಪ್ರಕಾಶ್ ಹೆಬ್ಬಾರ್

KannadaprabhaNewsNetwork | Published : Jun 21, 2024 1:07 AM

ಸಾರಾಂಶ

ಮನುಷ್ಯನ ದೈಹಿಕ ಮತ್ತು ಬೌದ್ಧಿಕ ಆರೋಗ್ಯಕ್ಕಾಗಿ ನಿರಂತರ ಯೋಗಾಸನ ಅವಶ್ಯಕತೆ ಇದೆ. ಯೋಗದಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ವಿಶ್ವ ಯೋಗ ದಿನ ಅಂಗವಾಗಿ ಪೂರ್ವಭಾವಿ ಜನಜಾಗೃತಿ ಜಾಥಾ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮನುಷ್ಯನ ದೈಹಿಕ ಮತ್ತು ಬೌದ್ಧಿಕ ಆರೋಗ್ಯಕ್ಕಾಗಿ ನಿರಂತರ ಯೋಗಾಸನ ಅವಶ್ಯಕತೆ ಇದೆ. ಯೋಗದಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೇಳಿದರು.

ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಗುರುವಾರ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆ ಮಕ್ಕಳೊಂದಿಗೆ ಪತಂಜಲಿ ಯೋಗ ಸಮಿತಿ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಯೋಗ ಜಾಗೃತಿ ಜಾಥಾದಲ್ಲಿ ಮಾತನಾಡಿ, ಯೋಗ ದಿನಾಚರಣೆ ಈ ವರ್ಷ ಮಹಿಳೆಯರನ್ನು ಹೆಚ್ಚು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಮಹಿಳಾ ಸಬಲೀಕರಣ ವರ್ಷವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಬಾರಿ 10ನೇ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದ್ದು, ಪಟ್ಟಣದ ಪವಿತ್ರ ಕ್ಷೇತ್ರ ಹಿರೇಕಲ್ಮಠದಲ್ಲಿ 21ರಂದು ಬೆಳಗ್ಗೆ 5.30 ಗಂಟೆಯಿಂದ 7 ಗಂಟೆವರೆಗೆ ಯೋಗ ದಿನಾಚರಣೆ ನಡೆಸಲಾಗುತ್ತಿದೆ ಎಂದರು.

ಪತಂಜಲಿ ಯೋಗ ಸಮಿತಿ ಖಜಾಂಚಿ ಹಾಗೂ ಯೋಗಪಟು ಶ್ರೀಕಾಂತ್ ಕುರ್ಡೇಕರ್ ಮಾತನಾಡಿ, ಯೋಗವು ದೇಶದ ಸನಾತನ ಆಸ್ತಿಯಾಗಿದೆ. ಪ್ರಪಂಚವೇ ಯೋಗಕಲೆಯನ್ನು ಮೆಚ್ಚಿ, ಅನುಭವಿಸಿ, ಅನುಸರಿಸುತ್ತಿದೆ. ಇದು ಮಾನವನ ಮಾನಸಿಕ ಮತ್ತು ಬೌದ್ದಿಕ ಆರೋಗ್ಯ ಸಮತೋಲನದಲ್ಲಿಡಲು ತುಂಬಾ ಸಹಕಾರಿಯಾಗಿದೆ. ಎಲ್ಲರೂ ಯೋಗವನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ಎಂ.ಬಿ.ರುದ್ರೇಶ್ ಮಾತನಾಡಿ, ಪತಂಜಲಿ ಯೋಗ ಸಮಿತಿಯಿಂದ ನೂರಾರು ಜನ ತರಬೇತಿ ಪಡೆದು ಮನೆ ಮನೆಗಳಲ್ಲಿ ಯೋಗ ಹೇಳಿಕೊಡುತ್ತಿದ್ದಾರೆ. ಈ ಯೋಗಾಭ್ಯಾಸ ನಿರಂತರವಾಗಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭ ಯೋಗ ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ವೈಶ್ಯರ್, ಸುರೇಶ್ ಕುಂಬಾರ್, ದಿಲೀಪ್ ಶೇಟ್, ವಸಂತ್ ರಾಯ್ಕರ್, ಜಗದೀಶ್ ಆಚಾರ್, ಸುಜಾತ ಬೆನ್ನೂರುಮಠ, ಲಕ್ಷ್ಮೀ ಆರ್. ವೈಶ್ಯರ್, ವಿದ್ಯಾ ವಿನಾಯಕ್, ಅಂಬಿಕಾ ಹೆಬ್ಬಾರ್, ಶೀಲಾ, ಯಶೋಧ, ಮೀನಾ ಹಾಗೂ ಭಾರತೀಯ ವಿದ್ಯಾಸಂಸ್ಥೆ ಮಕ್ಕಳು, ಶಿಕ್ಷಕರು ಇದ್ದರು.

- - - -20ಎಚ್.ಎಲ್.ಐ3:

ಹೊನ್ನಾಳಿ ಪಟ್ಣಣದ ಪತಂಜಲಿ ಯೋಗ ಸಮಿತಿ ವತಿಯಿಂದ ಯೋಗ ದಿನ ಜಾಗೃತಿಗಾಗಿ ಭಾರತೀಯ ವಿದ್ಯಾಸಂಸ್ಥೆಯ ಮಕ್ಕಳು, ಶಿಕ್ಷಕರು, ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು ಪಟ್ಟಣದಲ್ಲಿ ಜಾಥಾ ನಡೆಸಿದರು.

Share this article