ಸನ್ಮಾನ ಕಾರ್ಯಕ್ರಮ । ಮಹಿಳೆಯರಿಗೆ ವಿವಿಧ ಸ್ಪರ್ಧೆಗಳ ಆಯೋಜನೆ
ಕನ್ನಡಪ್ರಭ ವಾರ್ತೆ ಸೊರಬಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುಪ್ತಗಾಮಿನಿಯಾಗಿ ಜೀವನ ಮತ್ತು ಜೀವವನ್ನು ಮುಟಿಪಾಗಿಟ್ಟಿದ್ದ ಮಹಿಳೆ ಹೋರಾಟಗಾರರಿಗೆ ದಿಟ್ಟತನದಿಂದ ಬೆನ್ನೆಲುಬಾಗಿ ನಿಂತ ನಾರಿ ಶಕ್ತಿ ಇತಿಹಾಸ ಪುಟಗಳಲ್ಲಿ ಅಜರಾಮರವಾಗಿದೆ ಎಂದು ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್ ಭದ್ರಾಪುರ ನುಡಿದರು.
ಪಟ್ಟಣದ ಮುರುಘಾ ಮಠದಲ್ಲಿ ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ೩ನೇ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಾಜದಲ್ಲಿ ಮಹಿಳೆಯರ ಪಾತ್ರ ಬರಿಯ ಕುಟುಂಬ ನಿರ್ವಹಣೆಗಷ್ಟೇ ಸೀಮಿತವಾಗಿಲ್ಲ. ಇತಿಹಾಸದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ, ಸಾಮಾಜಿಕ ಸಮಾನತೆಗಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ ಮಹಿಳೆ ಅದ್ಭುತ ಶಕ್ತಿಯಾಗಿ ಗುರ್ತಿಸಿಕೊಂಡಿದ್ದಾರೆ. ಅವರನ್ನು ಗೌರವಿಸುವುದು ಪುಣ್ಯದ ಕೆಲಸ ಎಂದರು.
ಮಹಿಳೆಯರನ್ನು ಗೌರವಿಸುವ ಸಮಾಜಗಳು ಬಹುಬೇಗ ಪ್ರಗತಿ ಪಥದತ್ತ ಸಾಗುತ್ತವೆ. ಮಹಿಳಾ ಸಬಲೀಕರಣ ಮನೆಯಿಂದಲೇ ಆರಂಭವಾಗಬೇಕು. ಗ್ರಾಮೀಣ ಮಹಿಳೆಯರ ಶೈಕ್ಷಣಿಕ ಪ್ರಗತಿ ಮತ್ತು ಸಂಘಟನೆ ಚುಂಚಾದ್ರಿ ಮಹಿಳಾ ವೇದಿಕೆಯ ಧ್ಯೇಯ. ಕೃಷಿಕ ಮಹಿಳೆಯರು ಕೃಷಿಯ ಜೊತೆಯಲ್ಲಿ ಕೈಕಸುಬುಗಳನ್ನು ಮಾಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬೇಕು ಎಂದರು.ಹರಿಹರದ ಗಿರಿಯಮ್ಮ ಕಾಂತಪ್ಪ, ಶ್ರೇಷ್ಠಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ.ಪವಿತ್ರ ಎಸ್.ಟಿ. ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಮತ್ತು ಸಬಲೀಕರಣ ಕುರಿತು ಉಪನ್ಯಾಸ ನೀಡಿ, ಮಹಿಳೆ ಎದುರಿಸುತ್ತಿರುವ ಸವಾಲುಗಳಿಂದ ಹೊರಬಂದು ಸಬಲೀಕರಣಗೊಂಡಾಗ ಮಾತ್ರ ಶೋಷಣೆಯಿಂದ ಮುಕ್ತಿ ಹೊಂದಬಹುದು. ಭಾರತೀಯ ಸಂಸ್ಕೃತಿಯ ಸಂರಕ್ಷಕಿಯಾಗಿ ಸ್ತ್ರೀ ಪ್ರಧಾನ ಮೌಲ್ಯಗಳನ್ನು ಉಳಿಸಿ ಬೆಳೆಸುವ ಬಾಧ್ಯತೆ ಮಹಿಳೆ ಹೊಂದಿದ್ದಾಳೆ ಎಂದರು.
ಶಿವಮೊಗ್ಗ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸೊರಬ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮಾಕಾಂತ ಗೌಡ ನೆಲ್ಲೂರು, ಸೊರಬ ಪಿಯು ಕಾಲೇಜಿನ ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಮಹಿಳೆಯರಿಗೆ ಬಾಸ್ಕೆಟ್‌ಬಾಲ್, ಲೆಮನ್ ಸ್ಪೂನ್, ಸೋಬಾನೆ ಪದ, ಕೋಲಾಟ, ಪಾಸಿಂಗ್ ಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಾಗರದ ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಭಾಗೀರಥಿ ಕೆರೆಕೊಪ್ಪ, ಕೃಷ್ಣಪ್ಪ ಕಾರೆಹೊಂಡ, ಶಶಿಕಲಾ ಗೌಡ, ವಕೀಲ ಹೇಮಂತರಾಜ್, ಸುಲೋಚನ ಸುಬ್ರಾಯ, ಸರಿತಾ ರಂಗಸ್ವಾಮಿ, ಜ್ಯೋತಿ ಉಮಾಕಾಂತ, ಸವಿತ ಕೃಷ್ಣ, ಗೋದಾವರಿ ಗಣಪತಪ್ಪ, ಮಮತಾ ಭೈರಪ್ಪ ನಿಸರಾಣಿ, ಗೋದಾವರಿ ಹೊಸಕೊಪ್ಪ, ಸುಮಲತ ವಿನಾಯಕ, ನಿರ್ಮಲ ವಕ್ಕಲಕೊಪ್ಪ, ಚೇತನ ರಮೇಶ್, ವೀಣಾ ನಾಯಕ, ನೇತ್ರಾವತಿ ನಾಯ್ಕ್, ಕವನಾ ಹುಲೇಮರಡಿ ಇದ್ದರು.