ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಆದಿ ಚುಂಚನಗಿರಿ ಸಭಾ ಭವನದಲ್ಲಿ ಮಂಗಳವಾರ ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಮಹಿಳಾ ವಿಭಾಗದ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯಗಳ ಪ್ರಾತ್ಯಕ್ಷತೆ ಹಾಗೂ ಸಾಮಾನ್ಯ ಜ್ಞಾನದ ರಸಪ್ರಶ್ನೆ ಸ್ಪರ್ಧೆ ಹಾಗೂ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, 26 ಜನ ಅಮಾಯಕ ಪ್ರವಾಸಿಗರನ್ನು ಧರ್ಮವನ್ನು ಕೇಳಿ ಹೊಡೆದುಹಾಕಿದ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಹೊಡೆದುಹಾಕಿ, ಈ ರಾಷ್ಟ್ರದಲ್ಲಿ ಮಹಿಳೆಯರ ಸಿಂದೂರಕ್ಕೆ ದೇಶ ಎಷ್ಟು ಬೆಲೆ ಕೊಡುತ್ತದೆ ಎಂಬುದನ್ನು ಈ ಜಗತ್ತು ನೋಡಿದೆ ಎಂದರು.
ನಮ್ಮ ದೇಶದಲ್ಲಿ ಮಹಿಳೆಯರಿಗೆ ಸನಾತನ ಪಾವಿತ್ರ್ಯತೆ ಹಾಗೂ ಗೌರವ ನೀಡಿದೆ. ಈ ದೇಶಕ್ಕೆ ನಮ್ಮ ಯೋಗದಾನ ಏನು ಎಂದು ಪ್ರತಿ ಹೆಣ್ಣು ಮಕ್ಕಳು ಯೋಚಿಸುವ ಕಾಲ ಬಂದಿದೆ. ಎಲ್ಲಾ ರಂಗಗಳಲ್ಲೂ ಮಹಿಳೆಯರು ಭಾಗವಹಿಸುತ್ತಿದ್ದು, ಅವಕಾಶ ಸಿಕ್ಕಿದರೆ ಏನು ಬೇಕಾದರೂ ಸಾಧನೆ ಮಾಡುತ್ತೇವೆ ಎಂದು ತೋರಿಸಿಕೊಟ್ಟಿದ್ದಾರೆ. ನಾನು ಗೃಹಮಂತ್ರಿಯಾಗಿದ್ದಾಗ ಮಹಿಳಾ ಕಾನ್‌ಸ್ಟೇಬಲ್‌ನಿಂದ ಹಿಡಿದು, ಮಹಿಳಾ ಐಪಿಎಸ್ ಅಧಿಕಾರಿಯವರೆಗೆ ಅವರ ಕಾರ್ಯಕ್ಷಮತೆಯನ್ನು ನೋಡಿದ್ದೇನೆ. ಮಹಿಳೆಯರು ಮಾನಸಿಕವಾಗಿ ತಯಾರಿ ನಡೆಸಿದರೆ ಏನೂ ಬೇಕಾದರೂ ಸಾಧಿಸಬಹುದು ಎಂದರು.ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಲುಪಿಸುವ ಬಹಳ ದೊಡ್ಡ ಹೊಣೆಗಾರಿಕೆ ನಮ್ಮ ಅಕ್ಕ-ತಂಗಿಯರ ಮೇಲಿದೆ. ಮಗ ಸರಿಯಿಲ್ಲ ಎಂದರೆ ತಾಯಿ ಯಾರು ಎಂದು ಮೊದಲು ಕೇಳುತ್ತಾರೆ. ಈ ರಾಷ್ಟ್ರಕ್ಕೆ ಮಾನವ ಸಂಪನ್ಮೂಲ ಕೊಡುವ ತಾಯಿಯ ಜವಾಬ್ದಾರಿ ದೊಡ್ಡದು. ಆರ್ಥಿಕತೆಯನ್ನು ವಿಶ್ವದಲ್ಲೇ ನಾಲ್ಕನೇ ಅತೀ ದೊಡ್ಡ ದೇಶವಾದ ಭಾರತದ ಆರ್ಥಿಕ ಮಂತ್ರಿ ಓರ್ವ ಮಹಿಳೆಯಾಗಿದ್ದು, ದೇಶದ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾಂತಾ ಸುರೇಂದ್ರ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ವಿವಿಧ ೪೮ ಕಾರ್ಯಕ್ರಮಗಳನ್ನು ಈ ವೇದಿಕೆ ಹಮ್ಮಿಕೊಂಡು ಬಂದಿದೆ. ಗುರಿಮುಟ್ಟಲು ಗುರುಗಳ ಆಶೀರ್ವಾದ ಬೇಕು. ನಮ್ಮ ಸಂಘ ಗುರುಗಳ ಆಶೀರ್ವಾದದಿಂದ ಸಚ್ಚಾರಿತ್ರ, ಸದ್ಗುಣ, ಸದ್ಭಾವನೆ ಸಂಘಟನೆಯ ಮೂಲಮಂತ್ರವನ್ನಾಗಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಘಟನೆಯನ್ನು ಬಲವಾಗಿ ಕಟ್ಟಿ, ಮಹಿಳೆಯರಿಗೆ ಸಬಲೀಕರಣಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದರು.