
ಕನ್ನಡಪ್ರಭ ವಾರ್ತೆ ರಾಮನಗರ
ನಗರಸಭೆ ಸಭಾಂಗಣದಲ್ಲಿ ಪೌರ ನೌಕರರ ಸಂಘ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪುರಾಣ, ಇತಿಹಾಸಗಳಲ್ಲಿ ಮಹಿಳೆಯರಿಗೆ ಅಗ್ರಸ್ಥಾನ, ಶ್ರೇಷ್ಠ ಗೌರವ ಕೊಡಲಾಗಿದೆ. ಆದರೆ ಪುರುಷ ಪ್ರಧಾನ ಸಮಾಜ ಮಹಿಳೆಯರಿಗೆ ಅನೇಕ ಕಟ್ಟಳೆಗಳನ್ನು ಹೇರಿದೆ. ಅವರ ವಿರುದ್ಧ ದೌರ್ಜನ್ಯ, ಶೋಷಣೆ ನಿಂತಿಲ್ಲ ಎಂದರು.
ವೃದ್ಧಾಪ್ಯದಲ್ಲೂ ಮಹಿಳೆಯರು ಒಂದಿಲ್ಲೊಂದು ಸವಾಲನ್ನು ಎದುರಿಸುತ್ತಿದ್ದಾರೆ. ಜೀವನದ ಅಡೆತಡೆಗಳನ್ನು ಮೀರಿದರೆ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಆದರೆ ಸ್ವಾವಲಂಬಿಗಳಾಗಲು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಬೆಂಬಲ ಸಿಗುತ್ತದೆ ಎಂಬ ಸಮಾಧಾನಕರ ಅಂಶಗಳಿವೆ ಎಂದು ಹೇಳಿದರು.ಇಂದು ಮಹಿಳೆಯರಿಗೆ ಶಿಕ್ಷಣ ದೊರಕುತ್ತಿದೆ. ಹೀಗಾಗಿ ಮಹಿಳೆಯರು ಸ್ವಾವಲಂಬಿಗಳಾಗಲು ಸಹಾಯವಾಗುತ್ತಿದೆ. ಸರ್ಕಾರಗಳು ಮಹಿಳೆಯರ ರಕ್ಷಣೆಗೆ ಅನೇಕ ಕಾನೂನುಗಳನ್ನು ರೂಪಿಸಿವೆ. ಈ ಕಾನೂನುಗಳ ಬಗ್ಗೆ ಮಹಿಳೆಯರು ಅರಿಯಬೇಕು. ಆದರೆ ದುರುಪಯೋಗಪಡಿಸಿಕೊಳ್ಳಬಾರದು ಎಂದು ಶೇಷಾದ್ರಿ ಕಿವಿ ಮಾತು ಹೇಳಿದರು.
ಮಹಿಳೆಯರು ಇಂದು ಅನೇಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿ ಮತ್ತು ಕುಟುಂಬದ ನಡುವೆ ಮಹಿಳೆಯರು ಸಮಯವನ್ನು ವಿಂಗಡಿಸಿಕೊಳ್ಳುವ ಜಾಣ್ಮೆ ತೋರಿದರೆ, ಎರಡೂ ಕಡೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಅಧ್ಯಕ್ಷೆ ಪಾರ್ವತಮ್ಮ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಬಹುತೇಕ ಎಲ್ಲಾ ರಂಗಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದು ಸಾಧ್ಯವಾಗಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಹಕ್ಕುಗಳು ಮತ್ತು ಸಮಾನತೆಯಿಂದ ಎಂದರು.
ಎಪ್.ಡಿ.ಸಿ ಲಕ್ಷ್ಮೀದೇವಿ ಮಾತನಾಡಿ, ಮಹಿಳೆಯರನ್ನು ಪ್ರೋತ್ಸಾಹಿಸುವ ಎಲ್ಲ ಮನಸ್ಸುಗಳನ್ನು ಗೌರವಿಸಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಹಕ್ಕುಗಳನ್ನು ಕೊಡಿಸಿದ್ದಾರೆ. ಮಹಿಳೆಯರಿಗೆ ಶಿಕ್ಷಣ, ಅಧಿಕಾರ ಕೊಟ್ಟರೆ ಅವರು ಕರ್ತವ್ಯ ನಿರ್ವಹಿಸುವ ಪ್ರತಿ ಸ್ಥಳವೂ ಅಭಿವೃದ್ಧಿ ಕೇಂದ್ರವಾಗುತ್ತದೆ ಎಂಬುದು ಅಂಬೇಡ್ಕರ್ ಅವರಿಗೆ ಗೊತ್ತಿತ್ತು. ಹೀಗಾಗಿಯೆ ಅವರು ಮಹಿಳೆಯರಿಗೆ ಹಕ್ಕುಗಳನ್ನು ಪ್ರತಿಪಾದಿಸಿದ್ದಾರೆ ಎಂದರು.
ಪರಿಸರ ವಿಭಾಗದ ಎಇಇ ಸುಬ್ರಮಣಿ ಮಾತನಾಡಿದರು. ನಗರಸಭಾ ಉಪಾಧ್ಯಕ್ಷೆ ಗಿರಿಜಮ್ಮ, ನಗರಸಭಾ ಸದಸ್ಯರುಗಳಾದ ವಿಜಯಕುಮಾರಿ, ಪವಿತ್ರ, ಮಹಾಲಕ್ಷ್ಮೀ, ನಾಗಮ್ಮ, ಸೊಮಶೇಖರ್ (ಮಣಿ) ಉಪಸ್ಥಿತರಿದ್ದರು.