ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅಧಿಕ: ಶರಣಮ್ಮ

KannadaprabhaNewsNetwork |  
Published : May 24, 2026, 02:45 AM IST
ಚಿತ್ರ : 23ಎಂಡಿಕೆ1 : ಸೆಸ್ಕ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.  | Kannada Prabha

ಸಾರಾಂಶ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಇರುವ ಗಾಂಧಿ ಭವನದಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿಗಮದ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಎಸ್. ಜಂಗಿನ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಇರುವ ಗಾಂಧಿ ಭವನದಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿಗಮದ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಎಸ್. ಜಂಗಿನ ಉದ್ಘಾಟಿಸಿದರು.

ಇಂದು ಮಹಿಳೆಯರು ಎಲ್ಲ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾಲು ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಕರ್ತವ್ಯ ನಿರತ ಮಹಿಳೆಯರಿಗೆ ಎಷ್ಟೇ ಕಾರ್ಯ ಒತ್ತಡಗಳಿದ್ದರೂ ಕೌಟುಂಬಿಕ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಿಗಮದ ಮಡಿಕೇರಿಯ ವಿಭಾಗಿಯ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ರಾಮಚಂದ್ರ ಮಾತನಾಡಿ, ಸ್ತ್ರೀ ಮತ್ತು ಪುರುಷ ಸಮಾಜದ ಎರಡು ಕಣ್ಣುಗಳಿದ್ದಂತೆ. ಪುರುಷ ಪ್ರಧಾನ ಸಮಾಜ ಎಂಬುದು ಪ್ರಸಕ್ತ ಕಾಲಘಟ್ಟಕ್ಕೆ ಹೊಂದಿಕೆಯಾಗುವುದಿಲ್ಲ. ಇಂದು ಮಹಿಳೆಯರು ಸಾಮಾಜಿಕವಾಗಿ ಎಷ್ಟೇ ಮುಂದುವರಿದರೂ ಅವರಿಗೆ ಸಲ್ಲಬೇಕಾದ ಗೌರವದಲ್ಲಿ ಯಾವುದೇ ರಾಜಿ ಸಲ್ಲ. ಮಹಿಳೆಯರನ್ನು ಸದಾ ವಿಶೇಷ ಗೌರವದಿಂದಲೇ ಕಾಣಬೇಕು ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಡಳಿತಾಧಿಕಾರಿ, ಮಡಿಕೇರಿಯ ಸಖಿ ಒನ್ ಸ್ಟಾಪ್ ಕೇಂದ್ರದ ಕೆ.ಎಚ್. ಪ್ರಭಾವತಿ ಮಾತನಾಡಿ, ಮಹಿಳೆಯರು ಅಬಲೆಯಲ್ಲ, ಸಬಲೆಯರು ಎಂದು ಸಾಬೀತಾಗಿದೆ. ಆದರೆ ಸಮಾಜ ಎಷ್ಟೇ ಮುಂದುವರಿದರೂ ಮಹಿಳೆಯರು ಇಂದಿಗೂ ಬೇರೆ ಬೇರೆ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಿಟ್ಟುಕೊಳ್ಳಬಾರದು. ಪೊಲೀಸ್ ಇಲಾಖೆಗೆ ಮಾತ್ರ ದೂರು ಸಲ್ಲಿಸಬಹುದು ಎಂದು ತಿಳಿದುಕೊಳ್ಳಬೇಡಿ. ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲೆಂದೇ ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಈ ಸೌಲಭ್ಯವನ್ನು ಅರ್ಹ ಸಂತ್ರಸ್ತರು ಬಳಸಿಕೊಳ್ಳಬೇಕು ಎಂದರು. ಸೆಸ್ಕ್ ವಿರಾಜಪೇಟೆ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆರ್.ಪಿ. ನೀತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಬೇರೆ ಬೇರೆ ರೀತಿಯ ಒತ್ತಡದಿಂದಾಗಿ ಆರೋಗ್ಯ ಕಡೆಗೆ ಗಮನಹರಿಸುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಏನೇ ಇದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರು ಮೊದಲ ಆದ್ಯತೆ ನೀಡಬೇಕು. ಆರೋಗ್ಯ ಸರಿ ಇದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಎಂಬುದನ್ನು ಮಹಿಳಾ ಸಿಬ್ಬಂದಿ ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಭಾಗಿಯ ಲೆಕ್ಕಾಧಿಕಾರಿಯಾಗಿರುವ ಎಂ.ಎಸ್. ಸಂತೋಷ್ ಕುಮಾರ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ವಿನಯ್ ಕುಮಾರ್, ನಿಗಮದ ಕೊಡಗು ವೃತ್ತದ ಕೆ.ಎಂ. ದಿಲೀಪ್, ಕ.ವಿ.ಪ್ರ.ನಿ.ನಿ. ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮೈಸೂರಿನ ಕೆ.ಬಿ. ಕೃಷ್ಣರಾಜ್, ಕ.ವಿ.ಪ್ರ.ನಿ.ನಿ. ನೌಕರರ ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷರಾದ ಮಡಿಕೇರಿಯ ಶಿವಾನಂದ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಪದ್ಮಶ್ರೀ ನಾಯ್ಕ್ ಹಾಗೂ ಎಚ್.ಎಂ. ಮೇಘನಾ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಹ್ಮಾವರ ಜಿ ಎಮ್ ಶಾಲೆಯಲ್ಲಿ ರಾಜ್ಯ ತ್ರೋಬಾಲ್ ಆಯ್ಕೆ ಶಿಬಿರ
ಮೂಲ್ಕಿ: ನೂತನ ಪ್ಲಾಟ್‌ಫಾರ್ಮ್ ಲೋಕಾರ್ಪಣೆಗೆ ಸಿದ್ಧ