ಮೂಲ್ಕಿ: ಮೂಲ್ಕಿ ಭಾಗದ ರೈಲು ಪ್ರಯಾಣಿಕರ ಬಹು ವರ್ಷಗಳ ಬೇಡಿಕೆಯಾಗಿದ್ದ ಕೊಂಕಣ ರೈಲ್ವೆ ವ್ಯಾಪ್ತಿಯ ಮೂಲ್ಕಿ ರೈಲು ನಿಲ್ದಾಣದ ನೂತನ ಪ್ಲಾಟ್‌ಫಾರ್ಮ್ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಅವರ ಅನುದಾನದಿಂದ ಮೂಲ್ಕಿ ರೈಲು ನಿಲ್ದಾಣದಲ್ಲಿ ಸುಮಾರು 1.42 ಕೋಟಿ ರು. ವೆಚ್ಚದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ದಿಕ್ಕಿನಲ್ಲಿ ನೂತನ ಪ್ಲಾಟ್‌ಫಾರ್ಮ್ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಪೂರ್ಣಗೊಂಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ದಿಕ್ಕಿನಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪ್ಲಾಟ್‌ಫಾರ್ಮ್ ಗೆ ಸಂಪರ್ಕ ಕಲ್ಪಿಸುವ ಸ್ಕ್ಯೆ ವಾಕ್ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ಶೀಘ್ರ ನಡೆಯಲಿದೆ. ಪಡುಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿ, ನೂತನ ಪ್ಲಾಟ್‌ಫಾರ್ಮ್ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ. ಸೋಮಣ್ಣ ಅವರು ಶೀಘ್ರದಲ್ಲೇ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಮೂಲ್ಕಿ ರೈಲು ನಿಲ್ದಾಣ ಸಮಸ್ಯೆ: ಮೂಲ್ಕಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಿದರೂ ನಿಲ್ದಾಣದ ಸಂಪರ್ಕ ರಸ್ತೆ ಅವ್ಯವಸ್ಥೆಗಳ ಆಗರವಾಗಿದೆ. ಮೂಡುಬಿದಿರೆ, ಕಾರ್ಕಳ, ಕಿನ್ನಿಗೋಳಿ, ಕಟೀಲು ಮತ್ತಿತರ ಕಡೆಗಳಿಂದ ಮೂಲ್ಕಿ ರೈಲು ನಿಲ್ದಾಣಕ್ಕೆ ಮುಂಬೈ ಮತ್ತಿತರ ದೂರದ ಪ್ರದೇಶಕ್ಕೆ ಹೋಗಲು ಅನೇಕ ಪ್ರಯಾಣಿಕರು ಆಗಮಿಸುತ್ತಿದ್ದು, ಮೂಲ್ಕಿಯ ರಾಜ್ಯ ಹೆದ್ದಾರಿಯಿಂದ ರೈಲು ನಿಲ್ದಾಣ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಭಾಗದಲ್ಲಿ ಕೆಲವು ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ತ್ಯಾಜ್ಯ ಕೂಡ ಎಸೆಯುತ್ತಿದ್ದು, ರಸ್ತೆಯಲ್ಲಿ ಸಂಚರಿಸುವಾಗ ದುರ್ನಾತ ಬೀರುತ್ತಿದೆ. ಇದನ್ನು ನಿಯಂತ್ರಿಸಲು ಸಿಸಿ ಕ್ಯಾಮೆರಾದ ಅಗತ್ಯವಿದೆ. ಮುಲ್ಕಿ ರೈಲು ನಿಲ್ದಾಣ ಅಭಿವೃದ್ಧಿಯಾಗುತ್ತಿದ್ದು, ವಂದೇ ಭಾರತ್‌ ಸಹಿತ ದೂರದ ಊರಿಗೆ ಸಂಚರಿಸುವ ಪ್ರಮುಖ ರೈಲುಗಳ ನಿಲುಗಡೆ ಅವಶ್ಯಕತೆ ಇದೆ.