ಕನ್ನಡಪ್ರಭ ವಾರ್ತೆ ಕೋಲಾರಮಹಿಳೆಯರು ಕೌಶಲ್ಯಾಧಾರಿತ ತರಬೇತಿ ಪಡೆದುಕೊಳ್ಳುವ ಮೂಲಕ ಉದ್ಯಮ ಸ್ಥಾಪಿಸಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ.ಶ್ರೀನಿವಾಸ್ ಕರೆ ನೀಡಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ದಿಕೇಂದ್ರ, ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರಗಳ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ಉದ್ಯಮಶೀಲತಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಸರ್ಕಾರಿ, ಖಾಸಗಿ ಉದ್ಯೋಗ ಸಿಗುವುದು ಕಷ್ಟವಾಗಿರುವುದರಿಂದ ನೀವೇ ಉದ್ಯಮ ಸ್ಥಾಪಿಸಿ ನಾಲ್ಕಾರು ಮಂದಿಗೆ ಉದ್ಯೋಗ ಒದಗಿಸುವ ಶಕ್ತಿ ಪಡೆದುಕೊಳ್ಳಲು ತರಬೇತಿ ಅಗತ್ಯವಾಗಿದೆ ಎಂದ ಅವರು, ತಾಲ್ಲೂಕಿನ ಹೊನ್ನೇನಹಳ್ಳಿ, ಬೆಂಗಳೂರಿನ ರಾಜಾಜಿ ನಗರದ ಅವೇಕ್ ತರಬೇತಿ ಸಂಸ್ಥೆಯಲ್ಲಿ ಸಿಗುವ ವಿವಿಧ ಕೌಶಲ್ಯಗಳ ತರಬೇತಿ ಪಡೆಯಲು ಮುಂದಾಗಿ ಎಂದು ಸಲಹೆ ನೀಡಿದರು.ಮಾರುಕಟ್ಟೆ ಕೌಶಲ್ಯ ಅಗತ್ಯಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ರವಿಚಂದ್ರ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಎಲ್ಲಾ ನೆರವನ್ನು ಡಿಐಸಿ ಒದಗಿಸಲು ಸಿದ್ದವಿದೆ,ಉದ್ಯಮಿಗಳಾಗಲು ಕೌಶಲ್ಯ ಕಲಿಯುವ ಮಹಿಳೆಯರು ಅದರ ಜತೆಗೆ ಮಾರುಕಟ್ಟೆ ವೃದ್ದಿಯ ಕೌಶಲ್ಯವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.ನೀವು ಸ್ಥಾಪಿಸುವ ಕೈಗಾರಿಕೆ ಸಂಬಂಧ ವಸ್ತುನಿಷ್ಟ ವರದಿ ನೀಡಿ, ಸರ್ಕಾರದ ಸಹಾಯಧನ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕೋರಿದ ಅವರು, ಕೌಶಲ್ಯವೃದ್ದಿಗೆ ಅಗತ್ಯ ತರಬೇತಿ ಪಡೆಯಲು ಕೋರಿದರು.ಸ್ವಯಂ ಉದ್ಯೋಗ ಆರಂಭಿಸಿ
ಮಹಿಳೆಯರು ಸಹಾ ಉದ್ಯೋಗಕ್ಕಾಗಿ ಹುಡುಕಾಟ ನಡೆಸದೇ ನೀವು ಉದ್ದಿಮೆ ಸ್ಥಾಪಿಸಲು ಮುಂದೆ ಬನ್ನಿ, ಈ ತರಬೇತಿಗೆ ಸೀಮಿತರಾಗದಿರಿ, ರಾಜ್ಯಮಟ್ಟದಲ್ಲೂ ಉತ್ತಮ ತರಬೇತಿ ಪಡೆಯಲು ಮುಂದೆ ಬರಬೇಕು. ಮಹಿಳೆಯರಿಗೆ ಡಿಐಸಿಯಲ್ಲಿ ಸ್ವಯಂ ಉದ್ಯೋಗಿಗಳಾಗಲು, ಸಾಲ ಸೌಲಭ್ಯ ಪಡೆಯಲು ಅನೇಕ ಯೋಜನೆಗಳಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಘು ಉದ್ಯಮಕ್ಕೆ ಅಗತ್ಯವಾದ ಕೌಶಲ್ಯ ಪಡೆಯುವ ಬಗೆ, ಸಾಲಸೌಲಭ್ಯ, ಮಾರುಕಟ್ಟೆ ವೃದ್ದಿ ಮತ್ತಿತರ ಮಾಹಿತಿಯನ್ನು ನೀಡಿದರು.