ಹಾವೇರಿ: ಒಬ್ಬ ಯಶಸ್ವಿ ಪುರುಷನ ಸಾಧನೆ ಹಿಂದೆ ಒಬ್ಬ ಮಹಿಳೆ ಇರುವಂತೆ ಛತ್ರಪತಿ ಶಿವಾಜಿ ಮಹಾರಾಜರ ಹಿಂದೆ ತಾಯಿ ಜೀಜಾಬಾಯಿ ಇದ್ದ ಇತಿಹಾಸವಿದೆ. ಇಂದಿನ ಮಹಿಳೆಯರು ಸಾಧನೆಗೆ ಪ್ರೇರಣಾ ಶಕ್ತಿಯಾಗಲು ಮುಂದಾಗಬೇಕಿದೆ ಎಂದು ಈಶ್ವರಿ ಬ್ರಹ್ಮಕುಮಾರಿ ಮಹಾವಿದ್ಯಾಲಯದ ಅನ್ನಪೂರ್ಣ ಹೇಳಿದರು.ಇಲ್ಲಿನ ಶಿವಾಜಿ ನಗರದ ಒಂದನೇ ಕ್ರಾಸಿನಲ್ಲಿರುವ ಛತ್ರಪತಿ ಶಿವಾಜಿ ಸಭಾಭವನದಲ್ಲಿ ಮರಾಠ ಸಮಾಜ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ಆಯೋಜಿಸಿದ್ದ ಮಾತೆ ಜೀಜಾಬಾಯಿ ಅವರ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.ಛತ್ರಪತಿ ಶಿವಾಜಿ ಮಹಾರಾಜ ಆಗಲು ತಾಯಿಯಾಗಿ ಎಲ್ಲ ರೀತಿಯಲ್ಲಿ ತಮ್ಮ ಜ್ಞಾನ ತಿಳುವಳಿಕೆಯನ್ನು ಧಾರೆ ಎರದಿದ್ದಾರೆ. ಜೀಜಾಬಾಯಿ ಎಂದರೆ ಆತ್ಮಗೌರವದ ಮೂರ್ತಿಯಾಗಿ, ಎಂತಹ ಕಷ್ಟಗಳೇ ಬರಲಿ ಎದೆಗುಂದದೆ ಎದುರಿಸುವ ಧೈರ್ಯಶಾಲಿ, ಚೈತನ್ಯಮಯಿಯಾಗಿದ್ದರು. ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ ಸಂಸ್ಕಾರ ಕೊಟ್ಟು ತ್ಯಾಗ ಮಾಡಿ, ಶಿವಾಜಿ ಅವರ ವ್ಯಕ್ತಿತ್ವಕ್ಕೆ ಭದ್ರ ಬುನಾದಿಯಾದರು ಎಂದರು. ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಶಶಿರೇಖಾ ಮುಂಜೋಜಿ ಮಾತನಾಡಿ, ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ಸಮಾಜ ಸೇವೆ ಮಾಡಲು ಅವಕಾಶಗಳು ಇವೆ. ನಮ್ಮ ಸಮಾಜದ ಮಹಿಳೆಯರು ಸಂಘಟನೆಯ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಜೀಜಾಬಾಯಿ ಎಲ್ಲ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಅವರ ಜೀವನ ಸಂದೇಶಗಳನ್ನು ನಾವು ಅಳವಡಿಸಿಕೊಳ್ಳಲು ಮುಂದಾಗೋಣ ಎಂದರು.ಮರಾಠ ಸಮಾಜದ ಹಾವೇರಿ ತಾಲೂಕಾಧ್ಯಕ್ಷ ಉಮೇಶ ವಾಘ, ದತ್ತಾತ್ರಯ ಘಾಟಗೆ, ನಿಂಗಪ್ಪ ಆರೇರ ಜೀಜಾಬಾಯಿ ಕುರಿತು ಮಾತನಾಡಿದರು. ಮಾತೆ ಜೀಜಾಬಾಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಜೀವನ ಸಂದೇಶಗಳನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಗಾಯತ್ರಿ ಜಾಧವ್, ಅನಿತಾ ಜಾಧವ್, ಗೌರಮ್ಮ, ಪ್ರಭಾವತಿ ಗುಂಡೆ, ಸುಧಾ ತಿಳವಳ್ಳಿ, ಯಲ್ಲಮ್ಮ ತಿಳವಳ್ಳಿ, ಸುನಿತಾ ಮೋರೆ, ಸಂಜನಾ ಮೋರೆ ಇತರರು ಇದ್ದರು.