ಕಾಮಗಾರಿ ಆರಂಭಿಸುವ ಮೊದಲೇ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ಕೆಐಎಡಿಬಿ ಅಧಿಕಾರಿಗಳು ಕರೆಸಿಕೊಂಡಿದ್ದರು. ರೈತರು ವಿಮಾನ ನಿಲ್ದಾಣ ಕಾಮಗಾರಿಯ ಸದುದ್ದೇಶಕ್ಕಾಗಿ ಜಾಗ ನೀಡಿದ್ದೇವೆ. ನಮಗೂ ವಿಮಾನ ನಿಲ್ದಾಣ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕೆಂಬ ಆಶಯ ಇದೆ, ಆದರೆ ಪೊಲೀಸರನ್ನು ಮುಂದಿಟ್ಟುಕೊಂಡು ರೈತರಿಗೆ ಪರಿಹಾರ ನೀಡದೇ ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಇದು ರೈತ ಸಮೂಹದ ಮೇಲೆ ಸರ್ಕಾರಗಳು, ನಮ್ಮ ಜನಪ್ರತಿನಿಧಿಗಳು ಇಟ್ಟಿರುವ ಗೌರವಕ್ಕೆ ಹಿಡಿದ ಕೈ ಗನ್ನಡಿ ಎಂದು ರೈತರು ಆಕ್ರೋಶ ಹೊರ ಹಾಕಿದರು.
ಕನ್ನಡಪ್ರಭ ವಾರ್ತೆ ಹಾಸನ
ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ನೀಡಿರುವ ಜಾಗದಲ್ಲಿ ಕೆಐಎಡಿಬಿ ಅಧಿಕಾರಿಗಳು ಏಕಾಏಕಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ, ರೈತರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಮಾನ ನಿಲ್ದಾಣ ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ಬೂವನಹಳ್ಳಿಯ ಸರ್ವೇ ನಂ. 44/45, 44/56 ರಲ್ಲಿ ಭೂ ಮಾಲೀಕರು ಹಾಗೂ ಕೆಐಎಡಿಬಿ ಅಧಿಕಾರಿಗಳ ನಡುವೆ ಪರಿಹಾರದ ವಿಚಾರದಲ್ಲಿ ಗೊಂದಲವಿತ್ತು. ನಿಗದಿತ ಸ್ಥಳದಲ್ಲಿ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ಕ್ಯಾರೆ ಅನ್ನದ ಅಧಿಕಾರಿಗಳು ಶನಿವಾರ ಬೆಳ್ಳಂ ಬೆಳಗ್ಗೆಯೇ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಮುಂದಾಗಿರುವುದು ರೈತರನ್ನು ಕೆರಳಿಸಿತು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಸ್ವರೂಪ್ ಪ್ರಕಾಶ್ ಅವರು, ರೈತರು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು. ಈ ವೇಳೆ ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ ಎಂದ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟರಾಜು ಮಾತಿಗೆ ಕೆರಳಿದ ರೈತರು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರ ವಿರುದ್ಧ ಗರಂ ಆಗಿ ಗಲಾಟೆ ಆರಂಭಿಸಿದರು.
ಎಚ್ಚೆತ್ತ ಅಧಿಕಾರಿಗಳು ಜ.22ರ ಬುಧವಾರ ರೈತರ ಸಭೆ ನಡೆಸಿ ರೈತರೊಂದಿಗೆ ಮಾತುಕತೆ ನಡೆಸಿ, ಇರುವ ಸಮಸ್ಯೆ ಇತ್ಯರ್ಥ ಪಡಿಸಿ ನಂತರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು. ಇದರಿಂದಾಗಿ ಪರಿಸ್ಥಿತಿ ಸದ್ಯ ತಿಳಿಗೊಂಡಿದೆ.
ನಂತರ ಶಾಸಕರು ಕೂಡ ಮಾಧ್ಯಮದೊಂದಿಗೆ ಮಾತನಾಡಿ, ಕಾಮಗಾರಿ ಬಗ್ಗೆ ತಿಳಿಸಿದರು. ನಂತರ ರೈತರು ಕೂಡ ತಮ್ಮ ನಿರ್ಧಾರವನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.
ಅಧಿಕಾರಿಯ ಉಡಾಫೆ ವರ್ತನೆ:
ಸ್ಥಳದಲ್ಲಿದ್ದ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟರಾಜು ರೈತರೊಂದಿಗೆ ಉಡಾಫೆ ವರ್ತನೆ ತೋರಿಸಿದ್ದು,
ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ನೀಡಿದರೂ ಕೂಡ ಸೌಜನ್ಯಕ್ಕಾದರೂ ತಮ್ಮ ವಾಹನದಿಂದ ಇಳಿಯದೇ ವಾಹನದಲ್ಲಿ ಕುಳಿತು ಕಾಮಗಾರಿ ನಿಲ್ಲಿಸಬೇಡಿ, ಮುಂದುವರೆಸಿ ಏನು ಮಾಡುತ್ತಾರೋ ಮಾಡಿಕೊಳ್ಳಲಿ ಎಂಬ ಉಡಾಫೆ ಮಾತು ರೈತರನ್ನು ಕೆರಳಿಸಿತು.
100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ:
ಕಾಮಗಾರಿ ಆರಂಭಿಸುವ ಮೊದಲೇ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ಕೆಐಎಡಿಬಿ ಅಧಿಕಾರಿಗಳು ಕರೆಸಿಕೊಂಡಿದ್ದರು. ರೈತರು ವಿಮಾನ ನಿಲ್ದಾಣ ಕಾಮಗಾರಿಯ ಸದುದ್ದೇಶಕ್ಕಾಗಿ ಜಾಗ ನೀಡಿದ್ದೇವೆ. ನಮಗೂ ವಿಮಾನ ನಿಲ್ದಾಣ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕೆಂಬ ಆಶಯ ಇದೆ, ಆದರೆ ಪೊಲೀಸರನ್ನು ಮುಂದಿಟ್ಟುಕೊಂಡು ರೈತರಿಗೆ ಪರಿಹಾರ ನೀಡದೇ ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಇದು ರೈತ ಸಮೂಹದ ಮೇಲೆ ಸರ್ಕಾರಗಳು, ನಮ್ಮ ಜನಪ್ರತಿನಿಧಿಗಳು ಇಟ್ಟಿರುವ ಗೌರವಕ್ಕೆ ಹಿಡಿದ ಕೈ ಗನ್ನಡಿ ಎಂದು ರೈತರು ಆಕ್ರೋಶ ಹೊರ ಹಾಕಿದರು.
ಕಣ್ಮುಚ್ಚಿ ಕುಳಿತ ಕೆಪಿಟಿಸಿಎಲ್ ಅಧಿಕಾರಿಗಳು:
ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಂಪೌಂಡ್ ನಿರ್ಮಾಣಕ್ಕಾಗಿ 220ಕೆ.ವಿ ವಿದ್ಯುತ್ ಮಾರ್ಗದ ಅಡಿಯಲ್ಲಿ ಕೆಐಎಡಿಬಿ ಅಧಿಕಾರಿಗಳು ಬೃಹತ್ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದರೂ ಕೂಡ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕೆಪಿಟಿಸಿಎಲ್ ಅಧಿಕಾರಿಗಳು ವರ್ತಿಸಿದ್ದು, ಅವರ ಕಾರ್ಯ ದಕ್ಷತೆಯನ್ನು ಸಾರ್ವಜನಿಕರು ಪ್ರಶ್ನಿಸುವಂತೆ ಮಾಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.