ಮಹಿಳೆಯರು ಒಳ್ಳೆಯದು ಕೆಟ್ಟದ್ದನ್ನು ಯೋಚಿಸುವುದನ್ನು ರೂಢಿಸಿಕೊಳ್ಳಬೇಕು: ಚಲುವರಾಯಸ್ವಾಮಿ

KannadaprabhaNewsNetwork |  
Published : Jun 22, 2025, 11:47 PM IST
22ಕೆಎಂಎನ್ ಡಿ21 | Kannada Prabha

ಸಾರಾಂಶ

ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಈ ಯೋಜನೆಯಿಂದ ಮಹಿಳೆಯರು ದಿಕ್ಕು ತಪ್ಪುತ್ತಿದ್ದಾರೆ ಎನ್ನುತ್ತಾರೆ. ಇದನ್ನೆಲ್ಲಾ ನೀವು ಸಹಿಸಿಕೊಳ್ಳುತ್ತೀರಿ ಎಂದರೆ ಏನು ಹೇಳಬೇಕೋ ಗೊತ್ತಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಿಳೆಯರು ಬುದ್ಧಿವಂತರಾಗದ ಹೊರತು ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಶೇ.50ರಷ್ಟು ಇರುವ ಮಹಿಳೆಯರು ಒಳ್ಳೆಯದು ಕೆಟ್ಟದ್ದನ್ನು ಯೋಚಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಎಲೆಕೊಪ್ಪ ಗ್ರಾಮದಲ್ಲಿ 3 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರವೂ ಕೂಡ ಪ್ರಮುಖ. ಇದನ್ನು ಅರ್ಥೈಸಿಕೊಂಡು ಕುಟುಂಬ ನಿರ್ವಹಣೆಯ ಬುದ್ಧಿವಂತಿಕೆ ತೋರುವಂತೆ ಒಬ್ಬ ಶಾಸಕರನ್ನು ಆಯ್ಕೆ ಮಾಡಿ ಒಂದು ಸರ್ಕಾರವನ್ನು ಅಧಿಕಾರಕ್ಕೆ ತರಲು ದೂರದೃಷ್ಟಿಯಿಂದ ಯೋಚಿಸಬೇಕು ಎಂದರು.

ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಈ ಯೋಜನೆಯಿಂದ ಮಹಿಳೆಯರು ದಿಕ್ಕು ತಪ್ಪುತ್ತಿದ್ದಾರೆ ಎನ್ನುತ್ತಾರೆ. ಇದನ್ನೆಲ್ಲಾ ನೀವು ಸಹಿಸಿಕೊಳ್ಳುತ್ತೀರಿ ಎಂದರೆ ಏನು ಹೇಳಬೇಕೋ ಗೊತ್ತಿಲ್ಲ ಎಂದರು.

ರೈತರ ಸಾಲ ಮನ್ನಾ ಮಾಡಿದ ಪುಣ್ಯಾತ್ಮ ಕುಮಾರಸ್ವಾಮಿ ಸರ್ಕಾರದ ಖಜಾನೆಯಿಂದ ಕಟ್ಟಿಸಬೇಕಿತ್ತು. ಅವರು ಬಾಕಿ ಉಳಿಸಿ ಹೋಗಿರುವ ಇನ್ನೂ 8 ಸಾವಿರ ಕೋಟಿ ಹಣವನ್ನು ನಮ್ಮ ಸರ್ಕಾರ ಕಟ್ಟುತ್ತಿದೆ. ಯಾವುದಾದರೊಂದು ಯೋಜನೆ ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಜರಿದರು.

ತಾಲೂಕಿನಲ್ಲಿ ಪ್ರಮುಖವಾಗಿ ಯಾವುದಾದರೂ ಅಭಿವೃದ್ಧಿ ಕೆಲಸಗಳಾಗಿವೆ ಎಂದರೆ ಅದಕ್ಕೆ ನಾನು ಕಾರಣ. ಹತ್ತು ವರ್ಷ ಕಾಲ ಶಾಸಕರಾಗಿದ್ದವರು ತಾಲೂಕು ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಯಾವುದಾದರೊಂದು ಕಟ್ಟಡ ನಿರ್ಮಿಸಿದ್ದರೆ ಅಥವಾ ಯಾವುದೇ ಹಳ್ಳಿಯಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದರೆ ತಿಳಿಸಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಕುಟುಕಿದರು.

ಕ್ಷೇತ್ರದ ಜನರು ತಮ್ಮ ಸಮಸ್ಯೆ ಬಗೆಹರಿಸುವಂತೆ ಪ್ರತಿನಿತ್ಯ ಬೆಂಗಳೂರಿನ ನನ್ನ ನಿವಾಸಕ್ಕೆ ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಗ್ರಾಪಂ ಮಟ್ಟದಲ್ಲಿಯೇ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಪ್ರತಿ ಗ್ರಾಪಂ ಮಟ್ಟದಲ್ಲಿ ಕುಂದುಕೊರತೆ ಸಭೆ ನಡೆಸಿ ಕಾನೂನಾತ್ಮಕವಾಗಿ ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಇನ್ನುಳಿದ ಸಮಸ್ಯೆಗಳ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸಿ ಕಾಲಮಿತಿಯೊಳಗೆ ಬಗೆಹರಿಸುವಂತೆ ತಾಕೀತು ಮಾಡಲಾಗುವುದು. ಇಷ್ಟಾದ ಮೇಲೂ ಅರ್ಜಿ ಹಿಡಿದು ನನ್ನ ಬಳಿ ಬಂದರೆ ಅಂತಹ ಅರ್ಜಿಗಳಿಗೆ ಮನ್ನಣೆ ನೀಡುವುದಿಲ್ಲ ಎಂದರು.

ಇದೇ ವೇಳೆ ಗ್ರಾಮದ ಜೆಡಿಎಸ್ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಸಚಿವ ಚಲುವರಾಯಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಿನೇಶ್, ಮನ್ಮುಲ್ ನಿರ್ದೇಶಕ ಅಪ್ಪಾಜಿಗೌಡ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನಿಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಬೆಳ್ಳೂರು ಪಪಂ ಸದಸ್ಯೆ ಯಶೋಧಮ್ಮ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ