ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ

KannadaprabhaNewsNetwork | Published : Feb 9, 2025 1:15 AM

ಸಾರಾಂಶ

ಹುಟ್ಟಿದಾಗ ತವರು ಮನೆ ಬೆಳಗಿಸಿ, ಬಳಿಕ ಕೈಹಿಡಿದ ಪತಿಯ ಮನೆಯನ್ನೂ ಬೆಳಗುವ ಮಹಿಳೆಯನ್ನು ಎಲ್ಲರೂ ಗೌರವಿಸಬೇಕು.

ಶಿರಹಟ್ಟಿ: ಮಹಿಳೆಯರು ಎಲ್ಲ ರಂಗದಲ್ಲೂ ಛಾಪು ಮೂಡಿಸುತ್ತಿದ್ದು. ಹಗಲಿರುಳು ಶ್ರಮಿಸುವ ಕಾಯಕ ಜೀವಿಯಾದ ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಮುಖ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಕರೆ ನೀಡಿದರು.

ಶನಿವಾರ ಪಟ್ಟಣದ ವಾಲ್ಮಿಕಿ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಜರುಗಿದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹುಟ್ಟಿದಾಗ ತವರು ಮನೆ ಬೆಳಗಿಸಿ, ಬಳಿಕ ಕೈಹಿಡಿದ ಪತಿಯ ಮನೆಯನ್ನೂ ಬೆಳಗುವ ಮಹಿಳೆಯನ್ನು ಎಲ್ಲರೂ ಗೌರವಿಸಬೇಕು. ಮನೆಯ ಏಳಿಗೆಗಾಗಿ ಸಕಲ ಧಾರೆ ಎರೆಯುವ ಮಹಿಳೆಯರು ಆರೋಗ್ಯದ ಕಡೆಗೂ ಗಮನಹರಿಸಬೇಕು. ಧ್ಯಾನ, ಯೋಗ, ದೇವರ ನಾಮಸ್ಮರಣೆಗಾಗಿ ಒಂದಿಷ್ಟು ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಇಂದು ಭಯಾನಕ ರೋಗಗಳು ಅತಿಕ್ರಮಣ ಮಾಡುತ್ತಿವೆ. ಮನುಷ್ಯನಿಗೆ ಆರೋಗ್ಯವೇ ನಿಜವಾದ ಸಂಪತ್ತು. ಕೋವಿಡ್-೧೯ ಸಾಂಕ್ರಾಮಿಕ ಆರಂಭದ ಬಳಿಕ ಈ ಮಾತಿಗೆ ಹೆಚ್ಚಿನ ಮಹತ್ವ ದೊರೆತಂತೆ ಕಾಣುತ್ತಿದೆ. ಉತ್ತಮ ಆರೋಗ್ಯವು ನಾವು ಖರೀದಿಸಬಹುದಾದ ಸಂಪತ್ತಲ್ಲ. ಅದಕ್ಕಾಗಿಯೇ ಎಲ್ಲ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ.ಬಳಿಗೇರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ತಂದೆ-ತಾಯಂದಿರುವ ಮಗು ಹಠ ಮಾಡುತ್ತಿದ್ದರೆ, ಅತ್ತರೆ, ಊಟ ಮಾಡದಿದ್ದರೆ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುತ್ತಾರೆ. ಮೊಬೈಲ್ ನೋಡುತ್ತಾ ಮಗು ಊಟ ಮಾಡುತ್ತದೆ.ಅಳುವುದನ್ನು ನಿಲ್ಲಿಸುತ್ತದೆ.ಇದು ಹೆತ್ತವರಿಗೆ ಮಗುವನ್ನು ಸಮಾಧಾನ ಮಾಡುವ ಬಹಳ ಸುಲಭ ವಿಧಾನ ಅನಿಸಬಹುದು. ಆದರೆ ಇದು ತಪ್ಪು ಎಂದು ಹೇಳಿದರು.

ಮಕ್ಕಳಿಗೆ ಮೊಬೈಲ್ ನೋಡುವ ಅಭ್ಯಾಸ ಚಿಕ್ಕ ವಯಸ್ಸಿನಲ್ಲೇ ರೂಢಿಯಾದರೆ ಅವರು ಸಮೀಪದೃಷ್ಟಿಯಂತಹ ಅಪಾಯಕಾರಿ ಕಾಯಿಲೆಗೆ ಬಲಿಯಾಗಬಹುದು. ಇದು ಮಕ್ಕಳ ದೃಷ್ಠಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಊಟ ಮಾಡುವಾಗ, ಅಳುವಾಗ ಮಕ್ಕಳನ್ನು ಸಮಾಧಾನಗೊಳಿಸಲು ಮೊಬೈಲ್ ನೀಡುವ ಹುಚ್ಚುತನಕ್ಕೆ ತಾಯಂದಿರು ಮುಂದಾಗಬಾರದು ಎಂದು ಕಿವಿ ಮಾತು ಹೇಳಿದರು.

ಕೊಪ್ಪಳ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಸುಧಾ ಜ್ಞಾನ ವಿಕಾಸ ಕೇಂದ್ರಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಶಿರಹಟ್ಟಿ ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ.ದೀಪಾ ಬಿಂಕದಕಟ್ಟಿ ಮಹಿಳೆಯರ ಆರೋಗ್ಯದ ಬಗ್ಗೆ ಜಾಗ್ರತೆ ಮೂಡಿಸಿದರು. ಜಿಲ್ಲಾ ಉಪನಿರ್ದೇಶಕರು ಎಸ್‌ಕೆಡಿಆರ್‌ಡಿಪಿ ಟ್ರಸ್ಟ್‌ ನ ಯೋಗೀಶ ಎ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಶಿವಪ್ರಕಾಶ್ ಮಹಾಜನಶೆಟ್ಟರ್ ಕಾರ್ಯಕ್ರಮದ ಕುರಿತು ಮಾತನಾಡಿದರು.

ಮಹಾಂತೇಶ ದಶಮನಿ, ಫಕ್ಕಿರೇಶ ರಟ್ಟಿಹಳ್ಳಿ, ಯೋಜನಾಧಿಕಾರಿ ಪುನಿತ್ ಓಲೇಕಾರ, ಅಶೋಕ ವರವಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಇದ್ದರು. ೩೧ನೇ ರಾಷ್ಟçಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದ ವಿದ್ಯಾರ್ಥಿನಿ ಪೂಜಾ ಭರಮಪ್ಪ ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share this article