ಇಂದಿನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಾ ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿರುವುದು ಸಮಾಜದ ಪ್ರಗತಿಗೆ ಸೂಚಕವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಚಂದ್ರಕಲಾ ಜೆ. ಅವರು ಅಭಿಪ್ರಾಯಪಟ್ಟರು.
ಸವಣೂರು: ಇಂದಿನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಾ ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿರುವುದು ಸಮಾಜದ ಪ್ರಗತಿಗೆ ಸೂಚಕವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಚಂದ್ರಕಲಾ ಜೆ. ಅವರು ಅಭಿಪ್ರಾಯಪಟ್ಟರು. ಪಟ್ಟಣದ ಬಸ್ ಘಟಕದಲ್ಲಿ ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಸವಣೂರ ಘಟಕದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾಧನೆಯೇ ಮುಖ್ಯವಾಗಿದ್ದು, ನಾವು ಏನನ್ನು ಸಾಧಿಸುತ್ತೇವೆ ಎಂಬುದರ ಮೂಲಕವೇ ನಮ್ಮ ವ್ಯಕ್ತಿತ್ವ ಹೊರಹೊಮ್ಮುತ್ತದೆ ಎಂದು ಹೇಳಿದರು. ಇತರರಿಗೆ ಮಾದರಿಯಾಗಬೇಕೆಂಬ ಉದ್ದೇಶ ಹೊಂದಿದ ಪ್ರತಿಯೊಬ್ಬರೂ ಸ್ಪಷ್ಟವಾದ ಗುರಿಯನ್ನು ಹೊಂದಿ, ಅದನ್ನು ಸಾಧಿಸಲು ಪ್ರಾಮಾಣಿಕತೆ ಮತ್ತು ದೃಢನಿಶ್ಚಯದೊಂದಿಗೆ ಶ್ರಮಿಸಬೇಕು ಎಂದು ಅವರು ಸೂಚಿಸಿದರು. ನಿರಂತರ ಪರಿಶ್ರಮ, ನಿಷ್ಠೆ ಮತ್ತು ಗುರಿ ಸಾಧನೆಗೆ ಇರುವ ಬದ್ಧತೆ ಇವುಗಳ ಸಮನ್ವಯದಿಂದಲೇ ಯಶಸ್ಸು ಸಾಧ್ಯವಾಗುತ್ತದೆ ಎಂದು ಅವರು ತಮ್ಮ ಮಾತಿನಲ್ಲಿ ಒತ್ತಿ ಹೇಳಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ ಕೆ.ಎಸ್. ಮಾತನಾಡಿ, ಮಹಿಳೆಯರನ್ನು ಒಂದು ನಿರ್ದಿಷ್ಟ ಪರಿಧಿಯೊಳಗೆ ಮಾತ್ರ ಕಾಣುವ ಮನೋಭಾವದಿಂದ ಸಮಾಜ ಹೊರಬರಬೇಕಾಗಿದೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ದುಃಖಕರ ಸಂಗತಿಯೆಂದರೆ, ಕೆಲ ಸಂದರ್ಭಗಳಲ್ಲಿ ಮಹಿಳೆಯರೊಳಗೇ ಇಂತಹ ಲಿಂಗ ತಾರತಮ್ಯದ ಮನೋಭಾವ ಮುಂದುವರಿಯುತ್ತಿರುವುದು ಗಮನಾರ್ಹವಾಗಿದೆ ಎಂದು ಅವರು ಹೇಳಿದರು. ಭಾರತೀಯ ಸಂವಿಧಾನವು ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹಾಗೂ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಈ ಸೌಲಭ್ಯಗಳು ಕೇವಲ ಕಾಗದದಲ್ಲೇ ಉಳಿಯದೇ, ಮಹಿಳೆಯರು ಅವುಗಳನ್ನು ಸದುಪಯೋಗಪಡಿಸಿಕೊಂಡು ಆತ್ಮವಿಶ್ವಾಸದಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಮುನ್ನಡೆಯಬೇಕು. ಪುರುಷರೊಂದಿಗೆ ಸಮಾನವಾಗಿ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ಮಹಿಳೆಯರಲ್ಲಿದೆ ಎಂಬುದು ನಿಸ್ಸಂಶಯ. ಸಮಾನತೆ, ಆತ್ಮವಿಶ್ವಾಸ ಮತ್ತು ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡು ಮಹಿಳೆಯರು ಸಮಾಜದ ಪ್ರಗತಿಗೆ ಇನ್ನಷ್ಟು ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಘಟಕ ವ್ಯವಸ್ಥಾಪಕ ಟಿ.ಎಸ್ ಮುನ್ನಾ ಅವರು ಮಾತನಾಡಿ, ನಮ್ಮ ಘಟಕದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ ಆದರೂ ಕೂಡಾ ಕಳೆದ ವರ್ಷದಿಂದ ಮಹಿಳಾ ದಿನಾಚರಣೆ ಆಚರಿಸಲು ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿಯಾಗುವ ರೀತಿಯಲ್ಲಿ ಆಚರಿಸೋಣ ಎಂದು ಕರೆ ನೀಡಿದರು.ತಹಶೀಲ್ದಾರ ರವಿಕುಮಾರ ಕೊರವರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುಲೋಚನಾ ಕಟ್ನೂರ ಮಾತನಾಡಿ, ಇತ್ತೀಚೆಗೆ ಸರಕಾರಿ ನೌಕರರ ಸಂಘದ ವತಿಯಿಂದ ರಾಜ್ಯಕ್ಕೆ ಮಾದರಿಯಾದ ಮಹಿಳಾ ದಿನ ಆಚರಿಸಿದ್ದು, ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಸಾರಿಗೆ ಸಿಬ್ಬಂದಿ ಸಲ್ಮಾಬೇಗಂ ಸುಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಘಟಕ ವಿಸ್ತರ್ಣ ಅಧಿಕಾರಿ ಎಚ್.ಪಿ. ಅತ್ತಾರ, ಸಾರಿಗೆ ನೌಕರರ ಸಂಘದ ಘಟಕದ ಅಧ್ಯಕ್ಷ ಎಸ್.ಎಸ್. ಮ್ಯಾಗೇರಿ, ಕಾರ್ಯದರ್ಶಿ ಮಹಾಂತಯ್ಯ ಹಿರೇಮಠ, ಸಿಬ್ಬಂದಿಗಳಾದ ಬಸವರಾಜ ನೇಗುಣಿ, ಜಿ.ಎಸ್. ಪಶುಪತಿಹಾಳ, ಆಶಾ ಕರಡಿ, ಗೌರಮ್ಮ ಪಿ, ಸೇರಿದಂತೆ ಹಲವಾರು ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಇದ್ದರು. ಸಾರಿಗೆ ನೌಕರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸಿಬ್ಬಂದಿ ಎಂ.ಬಿ. ಕುರಿಯವರ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.