ತವರಿನ ರಥಕ್ಕೆ 11 ಕಿಲೋ ಬೆಳ್ಳಿ ಕಳಸ ನೀಡಿದ ಮಹಿಳೆಯರು!

KannadaprabhaNewsNetwork | Published : May 11, 2025 11:49 PM
Follow Us

ಸಾರಾಂಶ

ನರಗುಂದ ತಾಲೂಕಿನ ಹದಲಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ನೂತನ ರಥೋತ್ಸವ ಮೇ 12ರಂದು ವಿಜೃಂಭಣೆಯಿಂದ ನಡೆಯಲಿದೆ. ತವರೂರಿನ ಈ ರಥಕ್ಕೆ ಗ್ರಾಮದ ಹೆಣ್ಣುಮಕ್ಕಳು ₹12 ಲಕ್ಷ ಸೇರಿಸಿ 11 ಕಿಲೋ ತೂಕದ ಬೆಳ್ಳಿ ಕಳಸ ದೇಣಿಗೆಯಾಗಿ ನೀಡಿದ್ದಾರೆ.

ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ, ನರಗುಂದತಾಲೂಕಿನ ಹದಲಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ನೂತನ ರಥೋತ್ಸವ ಮೇ 12ರಂದು ವಿಜೃಂಭಣೆಯಿಂದ ನಡೆಯಲಿದೆ. ತವರೂರಿನ ಈ ರಥಕ್ಕೆ ಗ್ರಾಮದ ಹೆಣ್ಣುಮಕ್ಕಳು ₹12 ಲಕ್ಷ ಸೇರಿಸಿ 11 ಕಿಲೋ ತೂಕದ ಬೆಳ್ಳಿ ಕಳಸ ದೇಣಿಗೆಯಾಗಿ ನೀಡಿದ್ದಾರೆ.

ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ಶಿಲ್ಪಿ ಮೌನೇಶ ಪತ್ತಾರ ₹60 ಲಕ್ಷ ವೆಚ್ಚದಲ್ಲಿ ವೀರಭದ್ರೇಶ್ವರ ರಥ ನಿರ್ಮಿಸಿದ್ದಾರೆ. ರಥವು 41 ಅಡಿ ಎತ್ತರವಿದ್ದು, 18 ಟನ್ ತೂಕವಿದೆ. ನವಭೃಂಗಿ, ಹರಕೆಸಿಂಹ ಆಕೃತಿಯ ಅಷ್ಟಮೂಲಿ ಬ್ರಹ್ಮ ರಥವನ್ನು ನಿರ್ಮಿಸಲಾಗಿದೆ.

ಈ ಹೊಸರಥಕ್ಕೆ ಮುಂದಿನ ವರ್ಷ ಬೆಳ್ಳಿ ಕಳಸ ನಿರ್ಮಿಸಿ ಕೊಡಲು ತವರಿನ ಜಾತ್ರೆಗೆ ಬಂದ ಮಹಿಳೆಯರು ಕಳೆದ ವರ್ಷವೇ ಯೋಜನೆ ರೂಪಿಸಿದ್ದರು. ಈ ಯೋಜನೆ ಪ್ರಕಾರ ಅವರೆಲ್ಲ ಪತಿಯ ಮನೆಯಿಂದ ನೀಡಿದ ಕಾಣಿಕೆ ಹಣ ₹12 ಲಕ್ಷ ಆಗಿದ್ದು, ಅದೇ ಹಣದಲ್ಲಿ ಈಗ ಬೆಳ್ಳಿ ಕಳಸ ಸಿದ್ಧವಾಗಿದ್ದು, ಸೋಮವಾರದ ರಥೋತ್ಸವ ಮತ್ತಷ್ಟು ಆಕರ್ಷಕವಾಗಿರಲಿದ್ದು, ಮತ್ತೆ ತವರಿನ ಜಾತ್ರೆಗೆ ಬಂದ ಹೆಣ್ಣುಮಕ್ಕಳಿಗೆ ಧನ್ಯತಾ ಭಾವ ಮೂಡಿಸಿದೆ.

ತಹಸೀಲ್ದಾರ್‌ ಉಪ ಖಜಾನೆಯಲ್ಲಿ ಹದಲಿ ಗ್ರಾಮದ ವೀರಭದ್ರ ದೇವಸ್ಥಾನಕ್ಕೆ ಸಂಬಂಧಿಸಿದ ಪುರಾತನ ಕಾಲದ ಎರಡು ಪೆಟ್ಟಿಗೆಗಳಿವೆ. ಅವುಗಳನ್ನು ತಹಸೀಲ್ದಾರ್‌ ಶ್ರೀಶೈಲ ತಳವಾರವರು ಗ್ರಾಮದ ಗುರುಹಿರಿಯರಿಗೆ ನೀಡಿದ್ದಾರೆ. ಗ್ರಾಮಸ್ಥರೆಲ್ಲರೂ ಆಭರಣದ ಪೆಟ್ಟಿಗೆಗಳ ಮೆರವಣಿಗೆ ಮಾಡಿ ಶ್ರೀ ವೀರಭದ್ರೇಶ್ವರ ದೇವರಿಗೆ ಅಲಂಕಾರ ಮಾಡುವರು.

ದೇವಸ್ಥಾನಕ್ಕೆ ತರಲಾದ ಆ ಎರಡು ಪೆಟ್ಟಿಗೆಗಳ ಒಂದರಲ್ಲಿ ತ್ರಿಮೂರ್ತಿ, ಗ್ರಾಮದೇವತೆ ಮುಖ, ವೀರಭದ್ರ ಮುಖ, ಚಾಮರ ಹಿಡಿಕೆ, ಬೆಳ್ಳಿ ಪೈಪ್, ತಾಳಿ ಪದಕ, ಬಂಗಾರದ ಪದಕ ಮತ್ತು ಗುಂಡು ಇವೆಲ್ಲವೂ ಇವೆ.

ಮತ್ತೊಂದು ಪೆಟ್ಟಿಗೆಯಲ್ಲಿ ಸಣ್ಣ ಕಿರೀಟ-4, ದೊಡ್ಡ ಕಿರೀಟ-1, ಚೌರ, ಪಾದುಕೆ ಸಣ್ಣದು-2, ದೊಡ್ಡದು-2, ಕೈ ಕತ್ತಿ, ಓಲೆ, ಕಿವಿ ಓಲೆ, ಕೆಂಪು ಹವಳದ ಸರ (ಬಂಗಾರದ), ಹಣೆ ಪಟ್ಟಿ, ನಡಪಟ್ಟಿ, ಗುಂಡಗಡಿಗೆ, ಬಸವಣ್ಣನ ಮುಖ ಮತ್ತು ಕೊರಳ ಪಟ್ಟಿ ಈ ರೀತಿಯಾಗಿವೆ.ಜಾತ್ರೆಯ ನಿಮಿತ್ತ ಇಲ್ಲಿಯ ಪೊಲೀಸ್‌ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ಅವರು ಹದಲಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ದೇವಸ್ಥಾನದ ಟ್ರಸ್ಟ್ ಕಮೀಟಿ ಸದಸ್ಯರು ಮತ್ತು ಗ್ರಾಮದ ಗುರುಹಿರಿಯರನ್ನು ಕರೆದು ಸಭೆ ನಡೆಸಿದರು. ರಥೋತ್ಸವ ಚೆನ್ನಾಗಿ ನಡೆಯುವಂತೆ ಜನರ ಸುರಕ್ಷತೆ ಮತ್ತು ಜಾತ್ರೆಯ ಯಶಸ್ಸಿನ ದೃಷ್ಟಿಯಿಂದ 20ಕ್ಕೂ ಹೆಚ್ಚು ಜನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೋರಿದರು.

ದೇವಸ್ಥಾನದ ಸುತ್ತಮುತ್ತಲಿನ ಎಲ್ಲ ರಸ್ತೆಗಳನ್ನು ಮತ್ತು ಚರಂಡಿಗಳನ್ನು ಗ್ರಾಮದ ಯುವಕ ಸಂಘದ ಸದಸ್ಯರೇ ಸ್ವಚ್ಛಗೊಳಿಸಿದ್ದಾರೆ. ದೇವಸ್ಥಾನದ ಆವರಣ‌ ಮತ್ತು ರಸ್ತೆಯ ಹೊರಗಡೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸುರಕ್ಷತೆ ದೃಷ್ಟಿಯಿಂದ ದೇವಸ್ಥಾನಕ್ಕೆ ಒಟ್ಟು 6 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಮೇ-12ರಂದು ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ನಡೆಯಲಿದೆ. ಸಾಯಂಕಾಲ 5 ಗಂಟೆಗೆ ನೂತನ ರಥೋತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ನಡೆಯುವ ಧಮ೯ ಸಭೆಯ ಸಾನಿಧ್ಯವನ್ನು ಪತ್ರಿವನ ಮಠದ ಡಾ. ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು, ಗುಳೇದಗುಡ್ಡದ ಮರಡಿ ಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ವಹಿಸಿಕೊಳ್ಳಲಿದ್ದಾರೆ.