ಮಹಿಳೆಯರಿಗೆ ಪ್ರತ್ಯೇಕ ಮಹಿಳಾ ಸಾಹಿತ್ಯ ವೇದಿಕೆಯ ಅವಶ್ಯಕತೆಯ ಹಿನ್ನೆಲೆಯಲ್ಲಿ ಆರಂಭವಾದ ಅಖಿಲ ಕರ್ನಾಟಕ ಮಹಿಳಾ ಸಾಹಿತ್ಯ ಪರಿಷತ್ತಿನ ಕಾರ್ಯ ರಾಜ್ಯದೆಲ್ಲೆಡೆ ವಿಸ್ತರಣೆಯಾಗಬೇಕು.
ಹುಬ್ಬಳ್ಳಿ:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಸಾಹಿತ್ಯಕ್ಕೆ ಸುದೀರ್ಘ ಮತ್ತು ಸಮೃದ್ಧ ಇತಿಹಾಸವಿದೆ. ಆರಂಭದಿಂದ ಇಂದಿನ ವರೆಗೆ ಮಹಿಳೆಯರು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಅನುಭವಗಳ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಶ್ರೀಸಿದ್ಧಾರೂಢ ಮಠದಲ್ಲಿ ಶನಿವಾರ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ತಾಲೂಕು ಘಟಕದ ಪ್ರಥಮ ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದ ವರೆಗೆ ಮಹಿಳೆಯರ ಅಭಿವ್ಯಕ್ತಿ ವಿವಿಧ ಸ್ವರೂಪಗಳಲ್ಲಿ ಹರಿದು ಬಂದಿದೆ. ಹೆಣ್ಣು ಅಬಲೆಯಲ್ಲ ಸಬಲೆ ಎಂದು ಪ್ರತಿ ಹಂತದಲ್ಲೂ ಸಾಬೀತು ಮಾಡುತ್ತಾ ಬಂದಿದ್ದಾಳೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಸಾವಿರಾರು ಲೇಖಕಿಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ಡಿಜಿಟಿಲಿಕರಣದಿಂದ ಮಕ್ಕಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಮಕ್ಕಳ ಸರ್ವೋತ್ತಮ ಬೆಳವಣಿಗೆಯಲ್ಲಿ ಮನೆಯ ಸಂಸ್ಕೃತಿ, ಸಂಪ್ರದಾಯಗಳು ಪರಿಣಾಮ ಬೀರುತ್ತವೆ. ಮಕ್ಕಳಲ್ಲಿ ತಾಯಿಯಂದಿರು ಪುಸ್ತಕ ಓದಲು ಪ್ರೇರೇಪಿಸಬೇಕು. ಮಕ್ಕಳಿಗೆ ಸಮಯ ಮೀಸಲಿಡಿಡುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪದ್ಮಭೂಷಣ ಡಾ. ಬಸವರಾಜ ರಾಜಗುರು ಅವರ ಪತ್ನಿ ಭಾರತಿ ರಾಜಗುರು ಅವರು, ಕನ್ನಡ ಸಾಹಿತ್ಯ ಕ್ಷೇತ್ರ ಸೇರಿದಂತೆ ಸಾಹಿತ್ಯ ಪರಿಷತ್‌ನಲ್ಲಿಯೂ ಮಹಿಳಾ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಸಾಹಿತ್ಯ ಪರಿಷತ್‌ನ ಆಡಳಿತ ಸಮಿತಿಗೆ ಇಂದಿಗೂ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಪ್ರತ್ಯೇಕ ಮಹಿಳಾ ಸಾಹಿತ್ಯ ವೇದಿಕೆಯ ಅವಶ್ಯಕತೆಯ ಹಿನ್ನೆಲೆಯಲ್ಲಿ ಆರಂಭವಾದ ಅಖಿಲ ಕರ್ನಾಟಕ ಮಹಿಳಾ ಸಾಹಿತ್ಯ ಪರಿಷತ್ತಿನ ಕಾರ್ಯ ರಾಜ್ಯದೆಲ್ಲೆಡೆ ವಿಸ್ತರಣೆಯಾಗಲಿ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಸಮ್ಮೇಳನದ ಅಧ್ಯಕ್ಷೆ ಭಾರತಿ ರಾಜಗುರು ಅವರನ್ನು ಸಿದ್ಧಾರೂಢ ಮಠದ ಮಹಾದ್ವಾರದಿಂದ ಕೈಲಾಸ ಮಂಟಪದ ವರೆಗೆ ವಾದ್ಯಮೇಳದೊಂದಿಗೆ ಸಾರೋಟಿನಲ್ಲಿ ಕರೆ ತರಲಾಯಿತು. ಹಳೇ ಹುಬ್ಬಳ್ಳಿ ಹಿರೇಪೇಟ ಕರಿಯಮ್ಮ ದೇವಸ್ಥಾನದ ಲಲಿತಾ ಕಮ್ಮಾರ ಸಾನ್ನಿಧ್ಯ ವಹಿಸಿದ್ದರು. ಲೀಲಕ್ಕ ಚಂದ್ರಕಾಂತ ಬೆಲ್ಲದ, ಮಹಿಳಾ ಪರಿಷತ್ತಿನ ರಾಜ್ಯಾಧ್ಯಕ್ಷೆ ಪ್ರಭಾವತಿ ಹಾದಿಮನಿ, ಪರಿಷತ್ತಿನ ಸಂಸ್ಥಾಪಕ ಗಂಗಾಧರ ದೊಡ್ಡವಾಡ, ಡಾ. ಪಂಕಜಾ ಬ್ಯಾಕೋಡ, ಅನ್ನಪೂರ್ಣ ಅಂಗಡಿ, ಮಹಾದೇವಿ ಕೊಪ್ಪದ, ಸುಮಾದೇವಿ ಹಿರೇಮಠ, ಶಾರೂಕಖಾನ ಮುಲ್ಲಾ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.