ಗದಗ: ಅಂದು ಅನುಭವ ಮಂಟಪದ ಮೂಲಕ ಬಸವಣ್ಣವರು ಮಹಿಳೆಯರಿಗೆ ಪ್ರಾಧಾನ್ಯತೆ ಕಲ್ಪಿಸಿದ್ದರೆ, ಇಂದು ಮೋದಿ ಅವರು ಮಹಿಳಾ ಮೀಸಲಾತಿಯ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಿದ್ದಾರೆ. ಹಾಗಾಗಿ ಅವರು ಆಧುನಿಕ ಬಸವಣ್ಣ ಎಂದರೆ ತಪ್ಪಾಗಲಾರದು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಮಹಿಳಾ ಮೀಸಲಾತಿ ಜಾರಿ ಮಾಡುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿಗಣತಿ ಮಾಡಲು ನಿರ್ಧರಿಸಿದೆ. ಈ ಸಮಿತಿ ಆಧಾರದ ಮೇಲೆ 2028ರ ಚುನಾವಣೆಗೆ ಮಹಿಳಾ ಮೀಸಲಾತಿ ಸಿಗುತ್ತದೆ. ಸದ್ಯಕ್ಕೆ ಮಧ್ಯಂತರ ಚುನಾವಣೆ ನಡೆದರೆ ಈ ಕಾನೂನು ಅನ್ವಯಿಸುವುದಿಲ್ಲ. ಕ್ಷೇತ್ರ ಪುನರ್ ವಿಂಗಡನೆಗೂ ಮಹಿಳಾ ಮೀಸಲಾತಿಗೂ ಸಂಬಂಧವಿಲ್ಲ. ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸ್ಥಳೀಯ ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ಅದಕ್ಕಾಗಿ ಮಹಿಳೆಯರು ಗೊಂದಲಕ್ಕೆ ಒಳಗಾಗಬಾರದು ಎಂದರು.