ಕೊಪ್ಪಳ: ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ಕರ್ನಾಟಕವನ್ನು ಪಶ್ಚಿಮ ಬಂಗಾಳ ಆಗಲು ಬಿಡುವುದಿಲ್ಲ ಎಂದು ನಟ ಪ್ರಕಾಶ್ ರಾಜ್ ಎಚ್ಚರಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಅವರ ನೇತೃತ್ವದ ಪ್ರಕ್ರಿಯೆಯಲ್ಲಿ ಅಕ್ರಮಗಳು ಸಾಬೀತಾದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು. ಇದರ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಜರುಗಬೇಕು ಎಂದು ಆಗ್ರಹಿಸಿದರು.
‘400+’ ಎಂದು ಹೇಳಿಕೊಂಡಿದ್ದವರನ್ನು 240ಕ್ಕೆ ಇಳಿಸಿದ್ದೇವೆ. ಇದೀಗ ಎಸ್‌ಐಆರ್ ಮೂಲಕ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂಬುದು ನಮ್ಮ ಆರೋಪ. ಜನರಲ್ಲಿ ಜಾಗೃತಿ ಮೂಡಿಸಿ ಬಳಿಕ ಕಾನೂನು ಹೋರಾಟ ನಡೆಸಲಾಗುವುದು ಎಂದರು.ಎಸ್‌ಐಆರ್‌ನಲ್ಲಿ ಹೆಸರು ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋದಾಗ ಮರುಸೇರ್ಪಡೆಗೆ ಅರ್ಹರಾಗಿರುವ ಹಲವು ಪ್ರಕರಣಗಳು ಕಂಡುಬಂದಿವೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪ-ದೋಷಗಳ ಕುರಿತು ಇದು ಪ್ರಶ್ನೆ ಮೂಡಿಸಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಎಸ್‌ಐಆರ್ ತರಾತುರಿಯಲ್ಲಿ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
200ಕ್ಕೂ ಹೆಚ್ಚು ಫಾರಂ-7 ಒತ್ತಡ-ಆರೋಪ: ಬೆಳಗಾವಿಯ ಒಂದು ಬೂತ್‌ನಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕಲು 200ಕ್ಕೂ ಹೆಚ್ಚು ಮುದ್ರಿತ ಫಾರಂ-7ಗಳನ್ನು ತೆಗೆದುಕೊಂಡು ಹೋಗಿ ಮಹಿಳಾ ಬಿಎಲ್‌ಒ ಮೇಲೆ ಒತ್ತಡ ಹೇರಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು. ಬಿಎಲ್‌ಒ ನಿರಾಕರಿಸಿದ ಬಳಿಕ ಸ್ಥಳೀಯ ಬಿಜೆಪಿ ಮುಖಂಡರಿಂದ ದೂರವಾಣಿ ಮೂಲಕ ಒತ್ತಡ ಹೇರಲಾಗಿದೆ. ನಂತರ ವಿಚಾರಣೆ ವೇಳೆ ಬಂದವರು ಕಾರ್ಪೊರೇಷನ್‌ನಿಂದ ಬಂದವರಲ್ಲ, ಒಬ್ಬ ನಾಯಕನ ಸೂಚನೆಯ ಮೇರೆಗೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಫಾರಂಗಳಿಗೆ ಸಹಿ ಹಾಕಿದ ವ್ಯಕ್ತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂದು ತಿಳಿದುಬಂದಿದೆ ಎಂಬ ಆರೋಪವನ್ನೂ ಮಾಡಿದರು.
ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರ, ವೀರಸಂಗಯ್ಯ, ಕೆ.ಬಿ. ಗೋನಾಳ, ಡಿ.ಎಚ್. ಪೂಜಾರ್, ಕೆ.ಎಲ್.ಅಶೋಕ, ಯೂಸೂಫ್ ಕನ್ನಿ, ಕೆ. ಮಹಾಂತೇಶ, ಮಂಜುನಾಥ ಗೊಂಡಬಾಳ ಇದ್ದರು.