ರೌಡಿಗಳ ಜತೆ ಪೊಲೀಸರ ಸ್ನೇಹ ಸಹಿಸಲ್ಲ : ಪ್ರಿಯಾಂಕ್

KannadaprabhaNewsNetwork |  
Published : Sep 01, 2026, 04:30 AM IST
home minister

ಸಾರಾಂಶ

ಯಾವುದೇ ಕಾರಣಕ್ಕೂ ರೌಡಿಗಳ ಜತೆ ಪೊಲೀಸರ ಸ್ನೇಹ ಸಹಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರ ಬೆನ್ನಿಗೆ ಸರ್ಕಾರ ಇರುತ್ತದೆ ಎಂದು ರಾಜ್ಯ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.

 ಬೆಂಗಳೂರು : ಯಾವುದೇ ಕಾರಣಕ್ಕೂ ರೌಡಿಗಳ ಜತೆ ಪೊಲೀಸರ ಸ್ನೇಹ ಸಹಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರ ಬೆನ್ನಿಗೆ ಸರ್ಕಾರ ಇರುತ್ತದೆ ಎಂದು ರಾಜ್ಯ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.

‘ಗೃಹ ಸಚಿವರೊಂದಿಗೆ ಸಂವಾದʼ

ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಗೃಹ ಇಲಾಖೆ ಸೋಮವಾರ ಆಯೋಜಿಸಿದ್ದ ‘ಗೃಹ ಸಚಿವರೊಂದಿಗೆ ಸಂವಾದʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮತ್ತು ಕರ್ನಾಟಕದ ಸುರಕ್ಷಿತ ಹೂಡಿಕೆ ತಾಣ ಎಂಬ ಹೆಗ್ಗಳಿಕೆಯಲ್ಲಿಯೂ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಮಾದಕ ವಸ್ತು ಮಾರಾಟ ಜಾಲದ ವಿರುದ್ಧದ ‘ಬೇಡ ಬ್ರೋ’ ಅಭಿಯಾನವನ್ನು ಪೊಲೀಸರು ಮಿಷನ್‌ ಮೋಡ್‌ನಲ್ಲಿ ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಯಾರು ಮಾದಕ ವಸ್ತುಗಳನ್ನು ಸೇವಿಸುತ್ತಾರೆ, ಯಾರು ಮಾರಾಟ ಮಾಡುತ್ತಾರೆ, ಯಾವ ಮೆಡಿಕಲ್‌ ಶಾಪ್‌ ಅಥವಾ ಫಾರ್ಮಸಿಯಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್‌ ಇಲ್ಲದೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಾಮಾನ್ಯವಾಗಿಯೇ ತಿಳಿದಿರುತ್ತದೆ ಎಂದು ಹೇಳಿದರು.

ಡ್ರಗ್ಸ್ ಸಮಸ್ಯೆ ಬೆಂಗಳೂರು, ಮಂಗಳೂರು ಅಥವಾ ಬೆಳಗಾವಿಗೆ ಮಾತ್ರ ಸೀಮಿತವಾಗಿಲ್ಲ. ಚಿತ್ತಾಪುರ, ಚಿಂಚೋಳಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಗಾಂಜಾ ಬೆಳೆಯುತ್ತಿರುವುದು ಕಂಡುಬಂದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರು ನೆರೆರಾಜ್ಯಗಳ ಪೊಲೀಸರು ಬಂದು ದಾಳಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಸೂಚಿಸಿದರು.

ರೌಡಿಗಳ ಜತೆ ನೆಂಟಸ್ತಿಕೆ ಬೇಡ:

ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಪೊಲೀಸರು ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಇರುತ್ತದೆ. ಆದರೆ ಕೆಲವೊಮ್ಮೆ ಪೊಲೀಸರೇ ಅಂತಹ ವ್ಯಕ್ತಿಗಳನ್ನು ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ರೌಡಿಗಳೊಂದಿಗೆ ನೆಂಟಸ್ತಿಕೆ ಬೆಳೆಸುವುದು, ಅವರಿಗೆ ಮಾಹಿತಿ ನೀಡುವುದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹೋಗುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಯಾವುದೇ ರೀತಿಯಲ್ಲಿ ಅವರನ್ನು ಪ್ರೋತ್ಸಾಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು. ಈ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾನ್ಸ್‌ಟೇಬಲ್‌, ಹೆಡ್‌ ಕಾನ್ಸ್‌ಟೇಬಲ್‌. ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಸೇರಿದಂತೆ 800 ಪೊಲೀಸರ ಜತೆ ಅವರು ಸಂವಾದಿಸಿದರು. ಈ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟರಿಯಾ, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜಲಮಂಡಳಿ ಅಧ್ಯಕ್ಷರಿಗೆ ನೋಟಿಸ್‌ ನೀಡಲು ರೆಡ್ಡಿ ಸೂಚನೆ
ಮೆಜೆಸ್ಟಿಕ್‌ ಬಸ್‌ ನಿಲ್ದಾಣಗಳಿಗೆ ಸಾರಿಗೆ ಸಚಿವರ ಅನಿರೀಕ್ಷಿತ ಭೇಟಿ, ಪರಿಶೀಲನೆ