ಮೆಜೆಸ್ಟಿಕ್‌ನ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್‌ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ನಿಲ್ದಾಣದಲ್ಲಿದ್ದ ಪ್ರಯಾಣಿಕರ ಕುಂದು-ಕೊರತೆಗಳನ್ನು ಆಲಿಸಿದರು.

ಬೆಂಗಳೂರು : ಮೆಜೆಸ್ಟಿಕ್‌ನ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್‌ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ನಿಲ್ದಾಣದಲ್ಲಿದ್ದ ಪ್ರಯಾಣಿಕರ ಕುಂದು-ಕೊರತೆಗಳನ್ನು ಆಲಿಸಿದರು.

ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರಿಲ್ಲದಿರುವುದನ್ನು ಕಂಡು ಸಿಡಿಮಿಡಿ

ಪರಿಶೀಲನೆ ವೇಳೆ ಬಿಎಂಟಿಸಿ ನಿಲ್ದಾಣದಲ್ಲಿನ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರಿಲ್ಲದಿರುವುದನ್ನು ಕಂಡು ಸಿಡಿಮಿಡಿಗೊಂಡ ಬೈರತಿ ಸುರೇಶ್‌, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ವೈದ್ಯರ ನಿಯೋಜನೆಗೆ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದರು.

ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು

ಜತೆಗೆ, ನಿಲ್ದಾಣದಲ್ಲಿನ ಕಲ್ಲು ಬೆಂಚ್‌ಗಳ ಮೇಲೆ ಕುಳಿತು ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಹುತೇಕ ಪ್ರಯಾಣಿಕರು, ನಿಲ್ದಾಣದ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಆದರೆ, ಕೆಲ ಅಂಗಡಿಗಳಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಬೆಲೆ ಪಡೆಯುವ ಬಗ್ಗೆ ತಿಳಿಸಿದರು.

ಅದಕ್ಕೆ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಪರಿಶೀಲಿಸಿದರು. ಜತೆಗೆ ಯಾವುದೇ ಉತ್ಪನ್ನಗಳಿಗೂ ಪ್ರಯಾಣಿಕರಿಂದ ಹೆಚ್ಚುವರಿ ಬೆಲೆ ವಸೂಲಿ ಮಾಡಬಾರದು ಎಂದು ಸೂಚನೆ ನೀಡಿದರು. ಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಕೌಂಟರ್‌ಗೆ ಭೇಟಿ ನೀಡಿ ಪಾಸ್‌ ವಿತರಣೆ ಮಾಡುವ ಸ್ಥಳದಲ್ಲಿ ಕುಳಿತು ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳಿದರು. ಈ ವೇಳೆ ವಿದ್ಯಾರ್ಥಿ ಬಸ್‌ ಪಾಸ್‌ ವಿತರಣೆಯಲ್ಲಿ ಯಾವುದೇ ಲೋಪ ಮತ್ತು ವಿಳಂಬವಾಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.