ಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ ಉಡುಪಿ ಕಾರ್ಯಕ್ರಮದಲ್ಲಿ ೫೦ ಬಿಸಿಎ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ಮೊದಲ ಒನ್-ಪೇಜ್ ವೆಬ್‌ಸೈಟ್‌ನ್ನು ತಾವು ನಿರ್ಮಿಸುವ ಅನುಭವ ಪಡೆದರು.ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಶಿಕಾಂತ್ ಶೆಟ್ಟಿ, ವಿದ್ಯಾರ್ಥಿಗಳಿಗೆ ವೆಬ್‌ನಲ್ಲಿ ಸೃಜನಶೀಲರಾಗುವ ಆತ್ಮವಿಶ್ವಾಸ ಮತ್ತು ಕೌಶಲ್ಯ ನೀಡುವುದು ನಮ್ಮ ಉದ್ದೇಶ. ೫೦ ವಿದ್ಯಾರ್ಥಿಗಳು ತಮ್ಮ ಮೊದಲ ವೆಬ್‌ಸೈಟ್ ನಿರ್ಮಿಸಿರುವುದನ್ನು ನೋಡುವುದು ತುಂಬಾ ಪ್ರೇರಣಾದಾಯಕ. ಈ ಕಾರ್ಯಕ್ರಮವನ್ನು ಇನ್ನಷ್ಟು ವಿದ್ಯಾಸಂಸ್ಥೆಗಳಿಗೆ ತಲುಪಿಸುವ ಗುರಿ ನಮ್ಮದಾಗಿದೆ ಎಂದರು.
ಪ್ರಾಚಾರ್ಯ ಶ್ರೀನಾಥ ಪೈ ಮಾತನಾಡಿ, ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ ಒಂದು ಸಮುದಾಯ ಆಧಾರಿತ ಯೋಜನೆಯಾಗಿದ್ದು ಜಗತ್ತಿನ ಹೆಚ್ಚಿನ ವೆಬ್‌ಸೈಟ್‌ಗಳನ್ನು ಚಲಾಯಿಸುತ್ತಿರುವ ಓಪನ್ ಸೋರ್ಸ್ ವೇದಿಕೆಯಾದ ವರ್ಡ್ ಪ್ರೆಸ್ ಅನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಇದರ ಉದ್ದೇಶ. ಪ್ರಾಯೋಗಿಕ ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳು ವೆಬ್ ಅಭಿವೃದ್ಧಿ ಕೌಶಲ್ಯ ಸಂಪಾದಿಸಿ, ಡಿಜಿಟಲ್ ವಲಯದಲ್ಲಿ ವೃತ್ತಿ ಅವಕಾಶಗಳನ್ನು ಅರಿಯಲು ಇದು ನೆರವಾಗುತ್ತದೆ ಎಂದರು.ವರ್ಡ್ ಪ್ರೆಸ್ ಉಡುಪಿ ಸಮುದಾಯದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶಶಿಕಾಂತ್ ಶೆಟ್ಟಿ, ಕೆ. ಕೀರ್ತಿ ಪ್ರಭು ಮತ್ತು ವಿ. ಗೌತಮ್ ನಾವಡ ನೇತೃತ್ವದಲ್ಲಿ ನಡೆಸಲಾಯಿತು. ವರ್ಕ್ಶಾಪ್‌ನ ಪ್ರಮುಖ ಮಾರ್ಗದರ್ಶಕರಾಗಿ ಓಂಕಾರ್ ಉಡುಪ (ಸಿಇಒ, ಕೋಟಿಸಾಫ್ಟ್ ಸೊಲ್ಯೂಷನ್ಸ್, ಕೋಟೇಶ್ವರ) ಮತ್ತು ಮಂಜುನಾಥ ಎಂ.ಎಂ. (ಸ್ಥಾಪಕ, ಯುಕ್ತಾ ಡಿಜಿಟಲ್ಸ್ ತೀರ್ಥಹಳ್ಳಿ) ಕಾರ್ಯ ನಿರ್ವಹಿಸಿದರು.
ಬಿಸಿಎ ವಿಭಾಗದ ಉಪಪ್ರಾಚಾರ್ಯ ವಿಖ್ಯಾತ್ ಪ್ರಭು ಸ್ವಾಗತಿಸಿದರು. ಪ್ಲೇಸಮೆಂಟ್ ಅಧಿಕಾರಿ ವಿಜ್ಞೇಶ ಪ್ರಭು ವಂದಿಸಿದರು. ಲ್ಯಾಬ್ ನಿರ್ವಾಹಕ ರಾಘವೇಂದ್ರ ದೇವಾಡಿಗ ಹಾಜರಿದ್ದು ವಿದ್ಯಾರ್ಥಿಗಳಿಗೆ ತಾಂತ್ರಿಕ ನೆರವು ನೀಡಿದರು.