ಕನ್ನಡಪ್ರಭ ವಾರ್ತೆ ಮದ್ದೂರು
ನನ್ನ ಶಾಸಕತ್ವದ ಅವಧಿಯಲ್ಲಿ ತಾಲೂಕು ಪತ್ರಕರ್ತರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಿಕೊಡಲು ಶಕ್ತಿ ಮೀರಿ ಕೆಲಸ ಮಾಡುವುದಾಗಿ ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.ಪಟ್ಟಣದ ಶ್ರೀವೆಂಕಟೇಶ್ವರ ಕನ್ವೆನ್ಷನ್ ಸಭಾಂಗಣದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಂ.ಆರ್.ಚಕ್ರಪಾಣಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಪದವಿ ಹಸ್ತಾಂತರ ಮಾಡಿ ಮಾತನಾಡಿದರು.
ತಾಲೂಕು ಸಂಘವು ಸ್ವಂತ ಕಟ್ಟಡ ಹೊಂದುವುದು ತಮ್ಮ ಬಹುದಿನಗಳ ಬೇಡಿಕೆಯಾಗಿದೆ. ಪತ್ರಕರ್ತರ ಬೇಡಿಕೆಯಂತೆ ಆದಷ್ಟು ಶೀಘ್ರ ಸಂಘಕ್ಕೆ ಸ್ವಂತ ಕಚೇರಿ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಅದೇ ರೀತಿ ಪತ್ರಕರ್ತರಿಗೆ ನಿವೇಶನ ಒದಗಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.ಅಧಿಕಾರ ಎಂಬುದು ಒಂದು ಜವಾಬ್ದಾರಿ. ಈ ವೇಳೆ ನಾವು ಏನು ಮಾಡಬೇಕು ಎಂದು ಅರಿತು ತಮ್ಮ ಅವಧಿಯಲ್ಲಿ ಸಾಕ್ಷಿಗುಡ್ಡೆ ಉಳಿಸಿ, ನೆನಪಿನಲ್ಲಿ ಉಳಿಯುವಂತ ನಾಲ್ಕಾರು ಕೆಲಸ ಮಾಡಿ ಹೋಗಬೇಕು. ಅವಧಿಯಲ್ಲಿ ನೀವು ಮಾಡಿದ ಕೆಲಸದಿಂದ ಗೌರವ ಬರುತ್ತದೆ ಎಂದರು.
ಪತ್ರಕರ್ತರು ಸಮಾಜದ ಏಳ್ಗೆಗೆ, ಒಳಿತಿಗೆ ಪ್ರಮುಖ ಪಾತ್ರ ವಹಿಸುತ್ತಾರೆ. ಅದೇ ರೀತಿ ನೀವು ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ತಾಲೂಕಿನ ಜನರು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಅವರು ಕೊಟ್ಟಿರುವ ಸ್ಥಾನಕ್ಕೆ ಚ್ಯುತಿ ಬಾರದಂತೆ ತಿಳಿದಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.ಜೀವನದಲ್ಲಿ ನಾನು ಸ್ವಂತ ಪ್ರಯತ್ನದಲ್ಲಿ ಬೆಳೆದಿದ್ದೇನೆ. ಯಾರನ್ನೂ ಹೊಗಳಿ, ತೆಗಳಿ ಅಥವಾ ಬ್ಯಾಲೆನ್ಸ್ ಮಾಡಲು ಬಂದಿಲ್ಲ. ಸತ್ಯವನ್ನು ಮಾತನಾಡಲು ಯಾವುದೇ ಭಯ, ಮುಜುಗರ ಪಡಲ್ಲ. ನಾನೇ ಎಲ್ಲವನ್ನು ಮಾಡುತ್ತೇನೆ ಎಂದಿಲ್ಲ. ನನ್ನ ತಪ್ಪುಗಳು ಕಂಡು ಬಂದರೆ ಪತ್ರಕರ್ತರು ತಿಳಿವಳಿಕೆ ನೀಡಬೇಕು. ನೇರವಾಗಿ ನನ್ನನ್ನು ಪ್ರಶ್ನೆ ಮಾಡಿ ತಿದ್ದುವ ಕೆಲಸ ಮಾಡಬಹುದು ಎಂದರು.
ಸಮಾರಂಭದಲ್ಲಿ ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಶಿವನಂಜಯ ಪ್ರಾಸ್ತಾವಿಕ ಭಾಷಣ ಮಾಡಿದರು. ಪುರಸಭಾಧ್ಯಕ್ಷೆ ಕೋಕಿಲ ಅರುಣ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಮ್, ಸೋಮಶೇಖರ ಕೆರಗೋಡು, ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಆನಂದ, ಉಪಾಧ್ಯಕ್ಷ ರವಿ ಸಾವಂದಿಪುರ, ಖಜಾಂಚಿ ನಂಜುಂಡಸ್ವಾಮಿ, ನಿರ್ದೇಶಕ ಅಣ್ಣೂರು ಸತೀಶ, ನೂತನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ವೆಂಕಟೇಶ, ಉಪಾಧ್ಯಕ್ಷ ಸಿ. ಹರೀಶ್, ಖಜಾಂಚಿ ಅಂಬರಹಳ್ಳಿ ಸ್ವಾಮಿ, ಸಹ ಕಾರ್ಯದರ್ಶಿ ಕೆ.ಎಸ್. ಮಧು, ನಿಕಟಪೂರ್ವ ಪದಾಧಿಕಾರಿಗಳಾದ ಎಸ್. ಪುಟ್ಟಸ್ವಾಮಿ, ಪಿ ನಂದೀಶ, ಚಕ್ರಪಾಣಿ, ಪ್ರಭು ಸೇರಿದಂತೆ ಹಲವರು ಇದ್ದರು.