ಅಲೆಮಾರಿಗಳ ಅಭಿವೃದ್ಧಿಗಾಗಿ ದಕ್ಷತೆಯಿಂದ ಕೆಲಸ ಮಾಡಿಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚನೆ । ಮನ್ನಳ್ಳಿಯ ದರ್ವೇಶಿ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಮಾಡಲಿ
ಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚನೆ । ಮನ್ನಳ್ಳಿಯ ದರ್ವೇಶಿ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಮಾಡಲಿ ಕನ್ನಡಪ್ರಭ ವಾರ್ತೆ ಬೀದರ್ ಜಿಲ್ಲೆಯ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಸಂಬಂಧಿತ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಅಲೆಮಾರಿ ಜನಾಂಗದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಜಿಲ್ಲಾಮಟ್ಟದ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಪರಿಶೀಲನಾ ಮತ್ತು ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2008ರಲ್ಲಿ ರದ್ದುಪಡಿಸಲಾದ 25 ಜನ ಗೋಂದಳಿ ಸಮಾಜದ ನಿವೇಶನ ಅರ್ಜಿಯನ್ನು ಪುನಃ ಬೀದರ್ ನಗರ ಸಭೆಯ ಜಿ3 ಯೋಜನೆಯಡಿ ಸೇರಿಸುವಂತೆ ನಗರಸಭೆ ಆಯುಕ್ತರಿಗೆ ಪತ್ರ ಬರೆಯುವಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಅದೇ ರೀತಿ ಮನ್ನಳ್ಳಿಯ ದರ್ವೇಶಿ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಹಾಗೂ ಹಿಂದೆ ಈ ಸಮಾಜದ ನಿವೇಶನಕ್ಕೆ ಸಂಬಂಧಪಟ್ಟ ಕೆಲಸಗಳು ಇದ್ದಲ್ಲಿ ಶೀಘ್ರವೇ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರು. ಯಾವ ತಾಲೂಕಿನಲ್ಲಿ ಅಲೆಮಾರಿ ಜನಾಂಗದವರಿಗೆ ನಿವೇಶನ ನಿರ್ಮಾಣ ಮಾಡಲು ಸರ್ಕಾರಿ ಜಮೀನಿನ ಕೊರತೆ ಇದೆಯೋ, ಅಂತಹ ತಾಲೂಕಿನಲ್ಲಿ ಖಾಸಗಿ ಜಮೀನು ಖರೀದಿಸಲು ಕ್ರಮವಹಿಸಬೇಕು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯ ಭವನ ನಿರ್ಮಾಣಕ್ಕೆ ಅಲೆಮಾರಿ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು, ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ನಿಯಮಾನುಸಾರ ಕ್ರಮವಹಿಸುವ ಭರವಸೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ನಗರಸಭೆ ಆಯುಕ್ತ ಶಿವರಾಜ ರಾಠೋಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ್, ಬಸವಕಲ್ಯಾಣದ ಸಹಾಯಕ ಆಯುಕ್ತರು ಹಾಗೂ ವಿವಿಧ ತಾಲೂಕಿನ ತಹಸೀಲ್ದಾರರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಕರ್ನಾಟಕ ರಾಜ್ಯ ಹಿಂದುಳಿದ ಅಲೆಮಾರಿ, ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗನಾಥ ವಾಕುಡೆ, ಅಲೆಮಾರಿ ಸಂಘದ ಸದಸ್ಯರು, ಸೇರಿದಂತೆ ಇತರರು ಉಪಸ್ಥಿತರಿದ್ದರು. - - - -
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.