ಹಗರಿಬೊಮ್ಮನಹಳ್ಳಿ: ದೇಶದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜ್ಞಾನಕ್ಕೆ ಅಪೂರ್ವ ಕೊಡುಗೆ ನೀಡಿರುವ ಬಂಜಾರ ಸಮುದಾಯ ಇಂದಿಗೂ ಕೂಲಿ ಅರಸಿ ಗುಳೆ ಹೋಗುವ ಪರಿಸ್ಥಿತಿ ಇದೆ. ಸಮುದಾಯದ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಕೋಗಳಿಯ ಗುರುಗೋಪಾಲ ಸ್ವಾಮಿ ಶಾಂತಿಧಾಮದ ಶ್ರೀ ಡಾ.ಕುಮಾರ ಮಹಾರಾಜರು ಸೂಚಿಸಿದರು.
ಬಂಜಾರರ ಸಮಸ್ಯೆಗಳನ್ನು ನೋಡುವ ಕಣ್ಣುಗಳಿಲ್ಲ; ಆಲಿಸುವ ಕಿವಿಗಳಿಲ್ಲ. ಸಂಘದ ಸದಸ್ಯರು ಪ್ರತಿ ಹಳ್ಳಿಗಳಿಗೆ ತೆರಳಿ ಬಂಜಾರರ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹಾರ ಒದಗಿಸಲು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ರವಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಜಾರರ ವಸತಿ ಸೇರಿದಂತೆ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪಗಳಲ್ಲಿ ಯಾವುದೇ ಬದಲಾವಣೆಯಾಗದಿರುವ ಸಂಕೀರ್ಣ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಗೆ ಅವಸರ ಬೇಡ. ಯಥಾಸ್ಥಿತಿ ಮುಂದುವರೆಸಲು ಒತ್ತಾಯಿಸಿದರು.ಸಮಾರಂಭದಲ್ಲಿ ಸಂಘದ ಜಿಲ್ಲಾ ಮತ್ತು ಜಿಲ್ಲೆಯ ೫ ತಾಲೂಕುಗಳ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ಸಾನಿಧ್ಯ ವಹಿಸಿದ್ದ ದೂಪದಹಳ್ಳಿ ತಾಂಡಾದ ಶಕ್ತಿಪೀಠದ ಶ್ರೀಗಳಾದ ಶಿವಪ್ರಕಾಸ ಮಹಾರಾಜರು ಆಶೀರ್ವಚನ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಎಸ್.ಮೈಲಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಜಕುಮಾರ್ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಂ. ರಾಜು ನಾಯ್ಕ ನಿರ್ವಹಿಸಿದರು.