ಬಳ್ಳಾರಿ: ಗಡಿನಾಡಿನಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗ್ರತಗೊಳಿಸುವ ನಿಟ್ಟಿನಲ್ಲಿ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಶ್ರೀಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಯ್ಯವುಲ ವಿಷ್ಣು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ ನೀಡಿದ ಕುರುಗೋಡು ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇರುದ್ರ ಸಂಡೂರು, ಕನ್ನಡದ ಅನೇಕ ಸಾಹಿತಿಗಳು ನೀಡಿರುವ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಿದರಲ್ಲದೆ, ಭಾಷಾಭಿಮಾನ ಮೈಗೂಡಿಸಿಕೊಳ್ಳದ ಹೊರತು ಸ್ಥಳೀಯ ಭಾಷೆಗಳು ಗಟ್ಟಿಯಾಗಿ ನೆಲೆಗೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಸೊಂತಾ ಗಿರಿಧರ, ಅನುದಾನರಹಿತ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎನ್. ಮರಿಸ್ವಾಮಿ ರೆಡ್ಡಿ, ಮಹಾನಗರ ಪಾಲಿಕೆಯ ಸದಸ್ಯರಾದ ಗುಡಿಗಂಟೆ ಹನುಮಂತ, ಔಷಧ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ ಎನ್. ಶ್ರೀನಿವಾಸ ರೆಡ್ಡಿ, ಪ್ರಾಂಶುಪಾಲರಾದ ಸಂದೀಪ್ ಆಚಾರ್ಯ ಉಪಸ್ಥಿತರಿದ್ದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕೋಶಾಧ್ಯಕ್ಷ ಬಸವರಾಜ ಗದಗಿನ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಕೆ. ಶಿವರಾಂ, ಜಿನೇಂದ್ರ ಜೈನ್ ಹಾಗೂ ಕಸಾಪ ಜಿಲ್ಲಾ ಸಂಚಾಲಕ ಕಪ್ಪಗಲ್ಲು ಬಿ. ಚಂದ್ರಶೇಖರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.