ಹಾವೇರಿ: ಕುರುಬ ಸಮುದಾಯ ಬಹಳ ನಂಬಿಕಸ್ಥ ಸಮುದಾಯವಾಗಿದೆ. ಸಮಾಜದ ಕಾರ್ಯಕರ್ತರು, ಮುಖಂಡರು ಬಿಜೆಪಿಯೊಂದಿಗೆ ಕೈಜೋಡಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕಾಗಿದೆ ಎಂದು ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಿ. ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಈ ಹಿಂದೆ ನಾನು ಶಾಸಕನಾಗಿ ಆಯ್ಕೆಯಾಗುವಲ್ಲಿಯೂ ಕುರುಬ ಸಮುದಾಯದವರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಸಮಾಜ ಬಾಂಧವರ ಜತೆಗೆ ನಿರಂತರ ಒಡನಾಟ ಹೊಂದಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಮಂಡಲ ಅಧ್ಯಕ್ಷ ಸ್ಥಾನವನ್ನು ಕುರುಬ ಸಮುದಾಯಕ್ಕೆ ನೀಡಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಕುರುಬ ಸಮುದಾಯದ ಅಭಿವೃದ್ಧಿ ಮತ್ತು ಪ್ರಾಧಿಕಾರಕ್ಕೆ ಅನುದಾನ ನೀಡಿದ್ದಾರೆ. ಕನಕ ಜಯಂತಿ ಆಚರಣೆ ಮಾಡಲು ರಜೆ ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಎಂದು ಸ್ಮರಿಸಿದರು.
ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕುರುಬ ಸಮುದಾಯಕ್ಕೆ, ಕನಕ ಪ್ರಾಧಿಕಾರಕ್ಕೆ ಹಾಗೂ ಸಮಾಜದ ಮಠ-ಮಾನ್ಯಗಳಿಗೆ ಹೆಚ್ಚಿನ ಅನುದಾನ ನೀಡಿದೆ. ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಬೊಮ್ಮಾಯಿ ಅವರು ಸಿಎಂ ಇದ್ದ ಅವಧಿಯಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಸಮುದಾಯವನ್ನು ಗಮನದಲ್ಲಿಟ್ಟು ಬಿಜೆಪಿ ಅನೇಕ ಸ್ಥಾನಮಾನಗಳನ್ನು ಕಲ್ಪಿಸಿದ್ದು, ಸಮಾಜದವರು ಹೆಚ್ಚಿನ ಪ್ರಮಾಣದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದು ಕೋರಿದರು.ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ನೀಲಪ್ಪ ಚಾವಡಿ, ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಶಿವಕುಮಾರ ರಾಜನಹಳ್ಳಿ, ರಾಜ್ಯ ಪ್ರಕೋಷ್ಠ ಸಂಚಾಲಕ ಭೋಜರಾಜ ಕರೂದಿ, ವಿನಯ ತಳಗೇರಿ ಇದ್ದರು. ಜಗದೀಶ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.