ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ: ಡಿಸಿ ತಾಕೀತು

KannadaprabhaNewsNetwork |  
Published : Feb 14, 2026, 01:30 AM IST
13ಕೆಡಿವಿಜಿ17, 18, 19-ದಾವಣಗೆರೆ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಉಪ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ. | Kannada Prabha

ಸಾರಾಂಶ

ರಾಜ್ಯಾದ್ಯಂತ ಮಾ.18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಯಲ್ಲಿ ಜಿಲ್ಲೆಯ ಮತ್ತು ಮಕ್ಕಳ ಫಲಿತಾಂಶ ಗಣನೀಯವಾಗಿ ಹೆಚ್ಚಿಸಲು ಪ್ರತಿಯೊಂದು ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರು ಈಗಿನಿಂದಲೇ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದ್ದಾರೆ.

- ಎರಡೂ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ, ಶಾಲೆಗಳಿಗೆ ನೋಟಿಸ್‌ ನೀಡಲು ಡಿಡಿಪಿಐಗೆ ಆದೇಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ಮಾ.18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಯಲ್ಲಿ ಜಿಲ್ಲೆಯ ಮತ್ತು ಮಕ್ಕಳ ಫಲಿತಾಂಶ ಗಣನೀಯವಾಗಿ ಹೆಚ್ಚಿಸಲು ಪ್ರತಿಯೊಂದು ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರು ಈಗಿನಿಂದಲೇ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.

ನಗರದ ಡಿಸಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಉಪ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿಯಾಗಿ ಎರಡು ಪರೀಕ್ಷೆ ನಡೆಸಲಾಗಿದೆ. ಆದರೆ, ಕಡಿಮೆ ಫಲಿತಾಂಶ ಬಂದ ಶಾಲೆಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದರು.

ಪೂರ್ವಭಾವಿಯಾಗಿ ನಡೆದ ಎರಡೂ ಪರೀಕ್ಷೆಗಳಲ್ಲಿ ಶೇ.18ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ನೋಟಿಸ್ ನೀಡಿ, ವಿವರಣೆ ಪಡೆಯಬೇಕು. ಎಸ್ಸೆಸ್ಸೆಲ್ಸಿ ಪ್ರವೇಶ ಪಡೆದು, ಪರೀಕ್ಷೆಗೆ ಗೈರಾದ ಮಕ್ಕಳ ಮಾಹಿತಿ ಕಲೆ ಹಾಕಿ, ಮನೆ ಮನೆಗೆ ಭೇಟಿ ನೀಡಬೇಕು. ಅಂತಹ ಮಕ್ಕಳನ್ನು ಮತ್ತೆ ಶಾಲೆಗೆ ಕರೆ ತರುವ ಕೆಲಸವಾಗಬೇಕು ಎಂದು ತಾಕೀತು ಮಾಡಿದರು.

ಪರೀಕ್ಷೆಗೆ 21,400 ವಿದ್ಯಾರ್ಥಿಗಳು:

ಸಾಶಿಇ ಉಪ ನಿರ್ದೇಶಕ ಕೊಟ್ರೇಶ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ತರಗತಿಗೆ ಪ್ರವೇಶ ಪಡೆದಿದ್ದಾರೆ. ವಿವಿಧ ಕಾರಣಕ್ಕೆ 378 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಸಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ಮಕ್ಕ ಳು ಗೈರಾಗಿದ್ದರು. ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ), ಪರೀಕ್ಷೆ ಬಗ್ಗೆ ಆಸಕ್ತಿ ಇಲ್ಲದೆ ಗೈರಾಗಿರುವುದು ಮುಖ್ಯ ಕಾರಣವಾಗಿವೆ ಎಂದು ಹೇಳಿದರು.

ಒಟ್ಟು 49% ಫಲಿತಾಂಶ:

ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. 2ನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ. ಆದರೆ 1,460 ಮಕ್ಕಳು ಗೈರಾಗಿದ್ದರು. ಗೈರು ಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ, ಮಕ್ಕಳನ್ನು ಶಾಲೆಗೆ ಕರೆ ತರುವಂತೆ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು, ಪರೀಕ್ಷಾ ವಿಧಾನದ ಬಗ್ಗೆ ತಿಳಿಸಲಾಗುತ್ತಿದೆ ಎಂದು ವಿವರಿಸಿದರು.

ಪರೀಕ್ಷಾ ಮಂಡಳಿಯಿಂದ ನೀಡಲಾದ 4 ಮಾದರಿ ಪ್ರಶ್ನೆಪತ್ರಿಕೆ ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆ ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನಹರಿಸಿ, ಅಂತಹ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆ ಆಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಡಯಟ್ ಪ್ರಾಚಾರ್ಯರಾದ ಗೀತಾ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿದ್ದರು.

- - -

(ಬಾಕ್ಸ್‌)

* ಆಟಕ್ಕೂ ಅವಕಾಶ ನೀಡಲು ಸಲಹೆ

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಅತಿ ಮುಖ್ಯವಾಗಿ ಗೈರಾಗಿರುವ ಮಕ್ಕಳನ್ನು ಶಾಲೆಗೆ ಕರೆ ತರುವ ಕೆಲಸ ಶಿಕ್ಷಕರಿಂದ ಆಗಬೇಕು. ಮನೆ ಮನೆಗೆ ಭೇಟಿ ಮಾಡಿ ಪಾಲಕರ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂ ಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ಧಗೊಳಿಸಿ. ಪದೇಪದೇ ಪ್ರಶ್ನೆಪತ್ರಿಕೆ ಬಿಡಿಸುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಗೈರಾದ ಮಕ್ಕಳ ಸಂಖ್ಯೆ 1,400 ಇದೆ. ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು. ಮಕ್ಕಳಿಗೆ ಪಾಠದ ಜೊತೆ ಆಟಕ್ಕೂ ಅವಕಾಶ ನೀಡಬೇಕು ಎಂದರು.

- - -

-13ಕೆಡಿವಿಜಿ17, 18, 19.ಜೆಪಿಜಿ:

ದಾವಣಗೆರೆ ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಉಪ ಪ್ರಾಚಾರ್ಯರ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಸ್ಪತ್ರೆಯಲ್ಲಿ ಮಿಡ್ ವೈಫರಿ ಲೆಡ್ ಕೇರ್ ಯುನಿಟ್‌ಗೆ ಚಾಲನೆ
ನಗರೋತ್ಥಾನ ಕಾಮಗಾರಿ ಪೂರ್ಣಗೊಳಿಸಲು ನಿರ್ದಿಷ್ಟ ಕಾಲಮಿತಿ