ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ತಡೆಗೆ ಶ್ರಮಿಸಿ

KannadaprabhaNewsNetwork | Published : Dec 6, 2024 8:59 AM

ಸಾರಾಂಶ

ಹುಟ್ಟಿನಿಂದ ಹಿಡಿದು ಸತ್ತ ನಂತರವೂ ಸಹ ವ್ಯಕ್ತಿಯೂ ತನ್ನದೆಯಾದ ಹಕ್ಕು ಹೊಂದಿದ್ದಾನೆ

ಗಜೇಂದ್ರಗಡ: ಪ್ರತಿಯೊಬ್ಬರು ಜೀವಿಸಲು ಮುಕ್ತವಾದ ಹಕ್ಕು ಹೊಂದಿದ್ದು, ಸಮಾಜದಲ್ಲಿ ನಡೆಯುವ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಯುವ ಸಮೂಹ ಸೆಟೆದು ನಿಲ್ಲಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬಾಲ್ಯವಿವಾಹ, ಪೊಕ್ಸೋ, ಆರ್.ಟಿ. ಈ ಕಾಯ್ದೆ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹುಟ್ಟಿನಿಂದ ಹಿಡಿದು ಸತ್ತ ನಂತರವೂ ಸಹ ವ್ಯಕ್ತಿಯೂ ತನ್ನದೆಯಾದ ಹಕ್ಕು ಹೊಂದಿದ್ದಾನೆ. ಹೀಗಾಗಿ ಬಾಲ್ಯದಲ್ಲಿ ಶಿಕ್ಷಣ, ಆರೋಗ್ಯ ಸೇರಿ ಸಂವಿಧಾನದತ್ತವಾಗಿ ಬಂದಿರುವ ಹಕ್ಕುಗಳನ್ನು ಪಡೆಯಬಹುದಾಗಿದೆ. ಆದರೆ ಕಾನೂನಿನ ಜ್ಞಾನದ ಕೊರತೆಯಿಂದ ಬಹುತೇಕ ಅರ್ಹರು ಹಕ್ಕುಗಳನ್ನು ಪಡೆಯಲು ವಿಫಲವಾಗುತ್ತಾರೆ. ಪರಿಣಾಮ ಸಮಾಜದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಬಳಕೆ ಸೇರಿದಂತೆ ಅನೇಕ ಕಾನೂನಿಗೆ ವಿರುದ್ಧವಾದ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ವಿದ್ಯಾರ್ಥಿ ಸಮೂಹವು ಕಾನೂನಿನ ತಿಳಿವಳಿಕೆ ಜತೆಗೆ ಸಾಮಾಜಿಕ ಜಾವಾಬ್ದಾರಿ ಅರಿತು ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಜಿ.ಬಿ. ಗುಡಿಮನಿ, ಬಾಲ್ಯ ವಿವಾಹವು ಅಭಿವೃದ್ಧಿಗೆ ಮಾರಕವಾಗಿರುವ ಸಮಸ್ಯೆಯಾಗಿದೆ. ಅಲ್ಲದೆ ಸಂವಿಧಾನ ನೀಡಿರುವ ಹಕ್ಕುಗಳು, ಸರ್ಕಾರ ನೀಡುವ ಸೌಲಭ್ಯ ಬಗ್ಗೆ ನಾವು ಜಾಗೃತರಾದಾಗ ಸದೃಢ ಸಮಾಜ ನಿರ್ಮಿಸಲು ಸಾಧ್ಯವಿದೆ. ಹೀಗಾಗಿ ಯುವ ಸಮೂಹ ಇಂತಹ ಕಾರ್ಯಕ್ರಮಗಳ ಸದ್ಭಳಿಕೆಗೆ ಮುಂದಾಗಬೇಕು ಎಂದರು.

ಮಂಜುನಾಥ ಅಸೂಟಿ ಹಾಗೂ ಶ್ರೀಧರ ಎಂ.ಸಿ. ಉಪನ್ಯಾಸ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ್ ಮಾತನಾಡಿ, ಸರ್ಕಾರ ಮಕ್ಕಳ ರಕ್ಷಣೆಗಾಗಿ ಅನೇಕ ಕಾನೂನು ಜಾರಿಗೆ ತಂದಿದೆ. ಅವುಗಳ ಅನುಷ್ಠಾನಕ್ಕೆ ರಾಜ್ಯ ಹಾಗೂ ಜಿಲ್ಲಾ ಘಟಕಗಳು ಸಹ ಕರ್ತವ್ಯ ನಿರ್ವಹಿಸುತ್ತಿವೆ. ಹೀಗಾಗಿ ಯುವ ಸಮೂಹ ತಮ್ಮ ಸುತ್ತಲು ನಡೆಯುವ ಸಂವಿಧಾನ ವಿರೋಧಿ ಘಟನೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲು ಮುಂದಾಗುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಈ ವೇಳೆ ಎ.ಎಸ್. ವಡ್ಡರ, ವಿ.ಎಂ. ಜೂಜನಿ, ವೈ.ಆರ್. ಸಕ್ರೋಜಿ, ಪ್ರೇಮಾ ಚುಂಚಾ, ಬಸಮ್ಮ ಚಿಲಝರಿ, ರಮೇಶ ಕಳ್ಳಿಮನಿ, ಬಿ.ಬಿ. ಮಲ್ಲನಗೌಡರ ಸೇರಿ ಜಿಲ್ಲಾಮಕ್ಕಳ ರಕ್ಷಣಾ ಘಟಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

Share this article