ಗಡಿ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿ: ಬಾಗವಾನ

KannadaprabhaNewsNetwork | Published : Apr 2, 2024 1:04 AM

ಸಾರಾಂಶ

ಕರ್ನಾಟಕ ರಾಜ್ಯದ ಗಡಿ ಭಾಗಗಳು ಹಾಗೂ ನೆರೆಯ ರಾಜ್ಯಗಳಲ್ಲಿ ವಾಸಿಸುವ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಅವಿರತವಾಗಿ ಶ್ರಮಿಸಬೇಕು ಎಂದು ಉಪನ್ಯಾಸಕ ರಜಾಕ್ ಬಾಗವಾನ ಹೇಳಿದರು.

ಸುರಪುರ: ಕರ್ನಾಟಕ ರಾಜ್ಯದ ಗಡಿ ಭಾಗಗಳು ಹಾಗೂ ನೆರೆಯ ರಾಜ್ಯಗಳಲ್ಲಿ ವಾಸಿಸುವ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಅವಿರತವಾಗಿ ಶ್ರಮಿಸಬೇಕು ಎಂದು ಉಪನ್ಯಾಸಕ ರಜಾಕ್ ಬಾಗವಾನ ಹೇಳಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ದಿ.ಶಂಕ್ರಮ್ಮ ಮತ್ತು ದಿ.ವೀರನಗೌಡ ದತ್ತಿ, ದಿ.ಶರಣಮ್ಮ ಮತ್ತು ನರಸನಗೌಡ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸದಲ್ಲಿ ಗಡಿ ಭಾಗಗಳಲ್ಲಿ ಕನ್ನಡ ಬೆಳೆಸುವುದು ಮತ್ತು ಉಳಿಸುವ ಕುರಿತು ಮಾತನಾಡಿದರು.ಮನೆಯಲ್ಲಿ ಮಾತನಾಡುವ ಭಾಷೆ ಒಂದಾದರೆ ಸಮುದಾಯದಲ್ಲಿ ಮತ್ತೊಂದು ಭಾಷೆಗೆ ಒಗ್ಗಿಕೊಳ್ಳುವ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ. ಅತ್ತ ಆ ಕಡೆಯೂ ಅಲ್ಲದೆ ಇತ್ತ ಈಚೆ ಕಡೆಯೂ ಅಲ್ಲದೆ ಮಧ್ಯಂತರದಲ್ಲಿದ್ದಾರೆ ಎಂದರು.

ಭಾಷಾವಾರು ರಾಜ್ಯಗಳ ಗಡಿಗಳನ್ನು ಗುರುತಿಸಿದ ಬಳಿಕ ಕನ್ನಡ ಭಾಷಿಗರು ಹೊರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಾಂಗಣ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಅವರನ್ನು ಭಾಷೆವಾರು ಮತ್ತೊಮ್ಮೆ ಸಮಿತಿ ರಚಿಸಿ ನಮ್ಮವರನ್ನು ಕರೆತರುವ ಕೆಲಸ ಆಳುವ ಸರ್ಕಾರಗಳು ಮಾಡಬೇಕು ಎಂದು ಒತ್ತಾಯಿಸಿದರು.

ಗಡಿ ಭಾಗಗಳಲ್ಲಿ ಇರುವ ಕನ್ನಡಿಗರ, ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಅನ್ಯ ಭಾಷಿಗರು ಅವರನ್ನು ಎರಡನೆಯ ದರ್ಜೆಯ ನಾಗರಿಕರಂತೆ ನೋಡಿಕೊಳ್ಳುತ್ತಿದ್ದಾರೆ. ಹೊರ ರಾಜ್ಯ ಗಡಿಭಾಗಗಳಲ್ಲಿ ಇರುವ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಶಿಕ್ಷಣದ ಅಭಿವೃದ್ಧಿಗಾಗಿ ಸಕಾಲಕ್ಕೆ ಪಠ್ಯ ಪುಸ್ತಕಗಳನ್ನು ಪೂರೈಸಬೇಕು. ಅಗತ್ಯವಿದ್ದಲ್ಲಿ ಶಿಕ್ಷಕರನ್ನು ನೇಮಿಸುವ ಮೂಲಕ ಪ್ರೋತ್ಸಾಹಿಸಬೇಕಿದೆ. ಇದರತ್ತ ಕನ್ನಡಪರ ಸಂಘಟನೆಗಳು, ಸಂಸ್ಥೆಗಳು ಗಮನ ಹರಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಗಡಿಭಾಗದಲ್ಲಿ ವಾಸಿಸುವ ಕನ್ನಡಿಗರ ಸಮಸ್ಯೆಗಳಿಗೆ ಕನ್ನಡ ಮನಸ್ಸುಗಳು ಒಟ್ಟಾಗಿ ಸ್ಪಂದಿಸಬೇಕು. ಆ ಮೂಲಕ ಕನ್ನಡ ಭಾಷೆ ಉಳಿಸುವ ಬೆಳೆಸುವ ಕಾರ್ಯವಾಗಬೇಕಿದೆ. ಮುಂಬರುವ ದಿನಗಳಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಹೊರ ರಾಜ್ಯಗಳ ಕನ್ನಡ ಶಾಲೆಗಳಲ್ಲಿ ಮತ್ತು ಜನವಸತಿ ಪ್ರದೇಶಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಉದ್ಘಾಟಿಸಿದರು. ಕಸಾಪ ಗೌರವ ಕಾರ್ಯದರ್ಶಿ ಎಚ್.ವೈ.ರಾಠೋಡ್, ಕಸಾಪ ಗೌರವಕೋಶಾಧ್ಯಕ್ಷ ವೆಂಕಟೇಶ್ ಎಂ.ಪಾಟೀಲ್, ಬಸವರಾಜ ಜಮದರಖಾನಿ, ದೇವು ಎಸ್ ಹೆಬ್ಬಾಳ, ಸೋಮರೆಡ್ಡಿ ಮಂಗಿಹಾಳ, ಶ್ರೀಶೈಲ್ ಯಂಕಂಚಿ, ವಿದ್ಯಾಧರ ಪಾಟೀಲ್, ನಾಗರೆಡ್ಡಿ ಎಸ್.ಗೌಡಪ್ಪಗೋಳ, ಶಿವಶರಣಬಸವ ಪುರಾಣಿಕಮಠ, ಚೆನ್ನಪ್ಪ ಹೂಗಾರ್, ಬಸವರಾಜ್ ಅಮ್ಮಾಪುರ, ರಮೇಶ್ ಕುಲಕರ್ಣಿ ಶಾಂತಗೌಡ ಪಾಟೀಲ್ ನಾಗರಾಳ್, ರಾಘವೇಂದ್ರ ಭಕ್ರಿ, ಅನ್ವರ್ ಜಮಾದಾರ್, ವಸಂತಕುಮಾರ್ ಬಣಗಾರ, ಅರುಣ್ ಕುಮಾರ್ ಸಲೆಗಾರ್, ಶಿವಶರಣ ದಿಗ್ಗಾವಿ, ದೇವರಾಜ್ ಪಾಟೀಲ್ ಸೇರಿದಂತೆ ಇತರರಿದ್ದರು.

Share this article