ಆಲೂರು ಮುಖ್ಯರಸ್ತೆ ಮರು ಡಾಂಬರೀಕರಣ ಕಾಮಗಾರಿ ವೀಕ್ಷಣೆ

KannadaprabhaNewsNetwork | Published : May 8, 2025 12:34 AM
Follow Us

ಸಾರಾಂಶ

ಆಲೂರು ಪಟ್ಟಣದ ಮುಖ್ಯ ರಸ್ತೆ ಎರಡೂ ಬದಿಗಳಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಚರಂಡಿ ನಿರ್ಮಾಣ ಮಾಡಿದ್ದ ಪರಿಣಾಮ, ಮಳೆನೀರು ರಸ್ತೆಯಲ್ಲಿ ನಿಂತು ರಸ್ತೆ ಭಾಗಶಃ ಹಾಳಾಗಿತ್ತು. ಶಾಸಕ ಸಿಮೆಂಟ್ ಮಂಜುರವರು ಇತ್ತೀಚೆಗೆ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಳೆದ ಎರಡು ದಿನಗಳಿಂದ ಕಾಮಗಾರಿ ಚಾಲನೆಯಲ್ಲಿದ್ದು, ಬುಧವಾರ ಶಾಸಕರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಡಾಂಬರೀಕರಣ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಸುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಪಟ್ಟಣದ ಮುಖ್ಯ ರಸ್ತೆ ಮರು ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಸಿಮೆಂಟ್ ಮಂಜು ವೀಕ್ಷಿಸಿ ಪರಿಶೀಲನೆ ನಡೆಸಿದರು.

ಪಟ್ಟಣದ ಮುಖ್ಯ ರಸ್ತೆ ಎರಡೂ ಬದಿಗಳಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಚರಂಡಿ ನಿರ್ಮಾಣ ಮಾಡಿದ್ದ ಪರಿಣಾಮ, ಮಳೆನೀರು ರಸ್ತೆಯಲ್ಲಿ ನಿಂತು ರಸ್ತೆ ಭಾಗಶಃ ಹಾಳಾಗಿತ್ತು. ಶಾಸಕ ಸಿಮೆಂಟ್ ಮಂಜುರವರು ಇತ್ತೀಚೆಗೆ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಳೆದ ಎರಡು ದಿನಗಳಿಂದ ಕಾಮಗಾರಿ ಚಾಲನೆಯಲ್ಲಿದ್ದು, ಬುಧವಾರ ಶಾಸಕರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಡಾಂಬರೀಕರಣ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಾಘವೇಂದ್ರ ಹಾಗೂ ಸ್ಥಳೀಯರು ಶಾಸಕರಿಗೆ, ‘ಈ ಹಿಂದೆ ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಚರಂಡಿಗಳನ್ನು ನಿರ್ಮಿಸಿದ್ದು, ರಸ್ತೆಗಿಂತಲೂ ಎತ್ತರದಲ್ಲಿ ಚರಂಡಿಗಳನ್ನು ನಿರ್ಮಿಸಿದ ಕಾರಣ ಹಾಗೂ ಅಂಗಡಿ ಮುಂಗಟ್ಟಿನವರು ಆ ಚರಂಡಿಗಳನ್ನು ಮುಚ್ಚಿರುವ ಕಾರಣ ರಸ್ತೆಯಲ್ಲೇ ನೀರು ನಿಂತು ರಸ್ತೆ ಪದೇ ಪದೇ ಹಾಳಾಗುತ್ತಿದೆ’ ಎಂಬುದನ್ನು ಅವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಎಂಜಿನಿಯರ್ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಶಾಸಕರು, ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ನೀರು ನಿಲ್ಲಬಾರದು. ಎಲ್ಲೆಲ್ಲಿ ಚರಂಡಿಗಳನ್ನು ಮುಚ್ಚಲಾಗಿದೆಯೋ ಅವುಗಳನ್ನು ತಕ್ಷಣವೇ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಚರಂಡಿಗಳಲ್ಲಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಎಚ್ ವಿ ರಾಘವೇಂದ್ರ, ಈ ಹಿಂದೆ ಮುಖ್ಯರಸ್ತೆಯನ್ನು ಪಟ್ಟಣ ಪಂಚಾಯಿತಿಯ ನಗರೋತ್ತಾನ ಅನುದಾನದಡಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಿದ ಸಂದರ್ಭದಲ್ಲಿ ರಸ್ತೆಯ ಮಧ್ಯದಲ್ಲಿ ಅಳವಡಿಸಿರುವ ಡಿವೈಡರ್‌ಗಳ ಮಧ್ಯದಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದೆ ತಡೆಗೋಡೆಗಳಂತೆ ನಿರ್ಮಿಸಿದ್ದಾರೆ, ಹಾಗೂ ಈ ಹಿಂದೆ ರಸ್ತೆಯ ಎರಡು ಬದಿಗಳಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಚರಂಡಿಗಳು ಕೆಲವು ಕಡೆಗಳಲ್ಲಿ ರಸ್ತೆಗಿಂತಲೂ ಎತ್ತರವಿರುವ ಕಾರಣ, ಮಳೆಯ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಲ್ಲುವ ಪರಿಣಾಮ ರಸ್ತೆಗಳು ಗುಂಡಿಮಯವಾಗುತ್ತಿವೆ. ಇದರಿಂದಾಗಿ ಮುಖ್ಯ ರಸ್ತೆ ಹಾಳಾಗುತ್ತಿದ್ದು, ಸೂಕ್ತ ರೀತಿಯಲ್ಲಿ ಚರಂಡಿಗಳನ್ನು ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡದೆ ಇದ್ದರೆ ಮುಂದೆಯೂ ಸಹ ಈ ರಸ್ತೆ ಹಾಳಾಗುವುದು ಖಂಡಿತ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಚೌಲ್ಗೆರೆ ಬಳಿ ನಿರ್ಮಿಸಿರುವ ಟೋಲ್‌ನಿಂದ ತಪ್ಪಿಸಿಕೊಳ್ಳಲು ಕಾರು, ಲಾರಿ ಸೇರಿದಂತೆ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದಾಗಿ, ರಸ್ತೆಯು ಸಂಪೂರ್ಣವಾಗಿ ಹಾಳಾಗುತ್ತಿದೆ. ಮೊದಲು ಈ ಹೆಚ್ಚುವರಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದಂತೆ ಕ್ರಮ ಕೈಗೊಳ್ಳಬೇಕು. ರಸ್ತೆಯ ಮಧ್ಯದಲ್ಲಿ ನಿರ್ಮಿಸಿರುವ ಡಿವೈಡರ್‌ಗಳಿಂದಾಗಿ ಹಲವು ಅಪಘಾತಗಳು ಸಂಭವಿಸುತ್ತಿವೆ. ಇವುಗಳಿಗೆ ಸೂಕ್ತ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕೆಂದು ತಿಳಿಸಿದರು.