ರಾಜ್ಯದಲ್ಲಿ 27 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣ

KannadaprabhaNewsNetwork |  
Published : Jun 05, 2025, 03:02 AM ISTUpdated : Jun 05, 2025, 12:48 PM IST
ಸಚಿವ ಸತೀಶ ಜಾರಕಿಹೊಳಿ ಅವರು ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು | Kannada Prabha

ಸಾರಾಂಶ

ರಾಜ್ಯದ ವಿವಿಢೆದೆ ಒಟ್ಟು 42 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಪೈಕಿ 27 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

  ಬೆಳಗಾವಿ : ರಾಜ್ಯದ ವಿವಿಢೆದೆ ಒಟ್ಟು 42 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಪೈಕಿ 27 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ವಾರ್ತಾ ಭವನದಲ್ಲಿ ಬುಧವಾರ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 27 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ, ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಇನ್ನೂ 15 ಕಾಮಗಾರಿಗಳು ಬಾಕಿ ಉಳಿದಿವೆ ಎಂದರು.ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2 ವರ್ಷ ಅವಧಿ ಪೂರ್ಣಗೊಳಿಸಿದೆ. ನನಗೆ ಲೋಕೋಪಯೋಗಿ ಇಲಾಖೆ ಒಲಿದುಬಂದಿದ್ದು, ದೂರದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ. ಎಲ್ಲೆಡೆ ಉತ್ತಮ ರಸ್ತೆಗಳಿರಬೇಕು. ನಮ್ಮ ಇಲಾಖೆಯ ಕಾಮಗಾರಿ ಎಲ್ಲರ ಕಣ್ಣಿಗೆ ಕಾಣುವಂತಹದ್ದು. ಆದರೆ, ಬೇರೆ ಇಲಾಖೆಯ ಅಭಿವೃದ್ಧಿ ಕಾಮಗಾರಿ ಕಾಣದು. ನಮ್ಮ ರಸ್ತೆಗಳು ಎಲ್ಲರ ಕಣ್ಣಿಗೆ ಕಾಣುತ್ತವೆ. ಹಾಗಾಗಿ, ಬಹಳಷ್ಟು ಜವಾಬ್ದಾರಿಯಿದೆ. ಸರ್ಕಾರ ಎರಡು ವರ್ಷ ನಮ್ಮ ಇಲಾಖೆಗೆ ಅನುದಾನ ನೀಡಿದೆ. ರಸ್ತೆ ಹಾಗೂ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡಲಾಗಿದೆ. ಹಾಗಾಗಿ, ಭೂಸ್ವಾಧೀನ ಪ್ರಕ್ರಿಯೆ, ನ್ಯಾಯಾಲಯ ಸೇರಿದಂತೆ ಇತರೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಹಳೆಯ ಬಿಲ್‌ ಪಾವತಿ:

ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದ ಗುತ್ತಿಗೆದಾರರ 10 ವರ್ಷದ ಹಳೆಯ ಬಿಲ್‌ ಬಾಕಿ ಉಳಿದುಕೊಂಡಿತ್ತು. ಈ ಪೈಕಿ 8 ವರ್ಷದ ಗುತ್ತಿಗೆದಾರರಿಗೆ ಬಿಲ್‌ ಒಂದೇ ಬಾರಿ ಪಾವತಿಸಲಾಗಿದೆ. ₹1 ಕೋಟಿ ಒಳಗಿನ ಬಿಲ್‌ ಪಾವತಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ₹12 ಸಾವಿರ ಕೋಟಿ ಅನುದಾನ ಕಾಯ್ದಿರಿಸದೇ ವಿವಿಧ ಕಾಮಗಾರಿ ಕೈಗೊಳ್ಳಲಾಗಿತ್ತು. ಹಳೆಯ ಬಿಲ್‌ಗಳನ್ನು ಕೊಡುವ ಪ್ರಯತ್ನ ಮಾಡಲಾಗಿದೆ.

ಚೋರ್ಲಾ ರಸ್ತೆ ಅಗಲೀಕರಣಕ್ಕೆ ಅವಕಾಶ ಇಲ್ಲ:

ಬೆಳಗಾವಿ- ಚೋರ್ಲಾ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಹೆದ್ದಾರಿ ಅಗಲೀಕರಣಕ್ಕೆ ಅವಕಾಶವೇ ಇಲ್ಲ. ₹50 ಕೋಟಿ ವೆಚ್ಚದಲ್ಲಿ ಬೆಳಗಾವಿ - ಚೋರ್ಲಾ ರಾಜ್ಯ ಹೆದ್ದಾರಿಯನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಂತೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಗೆ ಪ್ರತ್ಯೇಕ ಅನುದಾನ ಕಲ್ಪಿಸಲಾಗಿದೆ ಎಂದರು.ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. 

ಮೊದಲ ವರ್ಷ ₹50 ಸಾವಿರ ಕೋಟಿ, ಎರಡನೇ ವರ್ಷ ₹56 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ ಬಿಮ್ಸ್‌ ಆಸ್ಪತ್ರೆ ಆವರಣದಲ್ಲಿ ₹200 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸವದತ್ತಿ, ರಾಮದುರ್ಗ ಮತ್ತು ಅಥಣಿ ತಾಲೂಕಿನಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಗೋಕಾಕ ನಗರದಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದರು.

ಪಿಯು ಕಾಲೇಜಿಗೆ ₹ 5 ಕೋಟಿ ಅನುದಾನ:

ಮುಂದಿನ ದಿನಗಳಲ್ಲಿ ಮಜಲಟ್ಟಿ ಹಾಗೂ ಬೈಲಹೊಂಗಲ ಮಾದರಿಯಲ್ಲಿ ನಿರ್ಮಿಸಲು ಅನುಕೂಲವಾಗುವಂತೆ ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 2 ಕಾಲೇಜುಗಳಿಗೆ ಒಟ್ಟು ₹5 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಯಿಂದ ನೀಡಲಾಗುವುದು. ಜಿಲ್ಲೆಯಲ್ಲಿ 87 ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ 100 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ. 

ಬೆಳಗಾವಿ ರಾಮತೀರ್ಥ ನಗರದಲ್ಲಿ ₹10 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯಲ್ಲಿನ ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ.ಬೆಳಗಾವಿ ರಿಂಗ್‌ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದ್ದು, ಶೇ.80ರಷ್ಟು ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಇನ್ನು ಶೇ.20 ರಷ್ಟು ಸಂತ್ರಸ್ತರಿಗೆ ಪರಿಹಾರ ನೀಡಬೇಕಿದೆ. ಬೆಳಗಾವಿಯಲ್ಲಿ ಫ್ಲೈಓವರ್‌ ಸೇತುವೆ ನಿರ್ಮಿಸಲಾಗುವುದು. ರಸ್ತೆ ಮಾರ್ಗಗಳಲ್ಲಿರುವ ದರ್ಗಾ, ಮಂದಿರಗಳಿಂದ ಸಂಚಾರ ವ್ಯವಸ್ಥೆಗೆ ಅಡೆತಡೆಯಾಗುತ್ತಿದೆ. ಆಯಾ ಸಮುದಾಯದ ಒಪ್ಪಂದದ ಮೇರೆಗೆ ಅವುಗಳನ್ನು ತೆರವುಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಬೆಳಗಾವಿ ಜಿಲ್ಲಾ ವಿಭಜನೆಯಾಗಲಿ:

ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆಗೊಳಿಸಿ ಮೂರು ಜಿಲ್ಲೆಯನ್ನಾಗಿಸಬೇಕಿದೆ. ಬೆಳಗಾವಿ, ಚಿಕ್ಕೋಡಿ ಮತ್ತು ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು. ಜಿಲ್ಲಾ ವಿಭಜನೆ ಘೋಷಣೆಯನ್ನು ಯಾವ ಸಂದರ್ಭದಲ್ಲಾದರೂ ಘೋಷಣೆ ಮಾಡಬಹುದು. ಆದರೆ, ಅದು ಪೂರ್ಣಪ್ರಮಾಣದಲ್ಲಿ ಜಾರಿಯಾಗಬೇಕಾದರೆ ಐದು ವರ್ಷ ಅವಧಿ ಬೇಕಾಗುತ್ತದೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಮೂರು ಜಿಲ್ಲೆಯನ್ನಾಗಿ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಬೇಕು.ಜೆ.ಎಚ್‌.ಪಟೇಲ್‌ ಅವಧಿಯಲ್ಲಿ ಬೆಳಗಾವಿ ಜಿಲ್ಲೆ ವಿಭಜಿಸಿ, ಚಿಕ್ಕೋಡಿ ಮತ್ತು ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಿಸಿ, ಗೆಜೆಟ್‌ ಹೊರಡಿಸಲಾಗಿತ್ತು. ಆಗ ಆಭಾಗದ ಜನರು ಸಂಭ್ರಮಾಚರಣೆ ಮಾಡಿದ್ದರು. ಆದರೆ, ಅದನ್ನು ರದ್ದುಗೊಳಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್‌ ( ರಾಜು) ಸೇಠ್‌ ಉಪಸ್ಥಿತರಿದ್ದರು.

PREV
Read more Articles on

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು