ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆಮಾಡುವ ಉದ್ದೇಶದ ಅರಿವು ಪದಾಧಿಕಾರಿಗಳಿಗಿರಬೇಕು. ಪದಾಧಿಕಾರಿಗಳಾಗಿ ಕೇವಲ ವಿಸಿಟಿಂಗ್ ಕಾರ್ಡ್ ಗೆ ಸೀಮಿತರಾಗಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಜಿತ್ ಪ್ರಸಾದ್ ಹೇಳಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಮತ್ತು ಕಾರ್ಮಿಕರ ವಿಭಾಗದ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರಗಳ ವಿತರಣೆ ಸಮಾರಂಭದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಳ ಮಟ್ಟದ ಕಾರ್ಯಕರ್ತನಿಂದ ಎಐಸಿಸಿ ಅಧ್ಯಕ್ಷರವರೆಗೂ ಎಲ್ಲರೂ ಕಾಯ,ವಾಚಾ,ಮನಸಾ, ಪಕ್ಷದ ಬಲವರ್ಧನೆಗೆ ತಳಮಟ್ಟದಿಂದ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಕಾಂಗ್ರೆಸ್ ಒಂದು ಜಾತ್ಯತೀತ ಪಕ್ಷವಾಗಿದ್ದು, ಅದರ ರಾಜಕೀಯ ನೀತಿಯು ಪ್ರಜಾಪ್ರಭುತ್ವದ ವೇದಿಕೆಯುಲ್ಲಿ ಭಾರತೀಯ ರಾಜಕೀಯ ನೀತಿಯಲ್ಲ, ಮಧ್ಯಮ ಮಾರ್ಗದ-ಎಡಪಕ್ಷದ ನೀತಿಯನ್ನು ಅನುಸರಿಸುವುದೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಕಾಂಗ್ರೆಸ್`ನ ಸಾಮಾಜಿಕ ನೀತಿ ಗಾಂಧೀಜಿಯವರ ಸರ್ವೋದಯದ ತತ್ವವನ್ನು ಆಧರಿಸಿದೆ, ಸಮಾಜದ ಎಲ್ಲಾ ವರ್ಗಗಳನ್ನೂ ಮೇಲಕ್ಕೆತ್ತುವುದು, ಆರ್ಥಿಕವಾಗಿ ದುರ್ಬಲ ಮತ್ತು ಸಾಮಾಜಿಕವಾಗಿ ಅಂಚಿನಲ್ಲಿರುವ ಜನರ ಜೀವನವನ್ನು ಸುಧಾರಿಸುವ ಗುರಿಹೊಂದಿದೆ. ಪಕ್ಷವು ಪ್ರಾಥಮಿಕವಾಗಿ ಸಾಮಾಜಿಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತದೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ, ಕಲ್ಯಾಣ ಮತ್ತು ಜಾತ್ಯತೀತತೆಗಳನ್ನು ಸಮತೋಲನಗೊಳಿಸುವ ಉದ್ದೇಶದಿಂದ ಧಾರ್ಮಿಕ ಆಡಳಿತ ಮತ್ತು ಬೋಧನೆಗಳಿಂದ ಮುಕ್ತವಾಗಿರುವ ಹಕ್ಕು ನೀಡುತ್ತದೆ ಎಂದು ತಿಳಿಸಿದರು.ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ನಾಯನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಭಾರತದ ಕೇಂದ್ರ ಸರ್ಕಾರವನ್ನು ಮತ್ತು ಅನೇಕ ಪ್ರಾದೇಶಿಕ ರಾಜ್ಯ ಸರ್ಕಾರಗಳನ್ನು ರಚಿಸಿತು. ಕಾಂಗ್ರೆಸ್ ಭಾರತದ ಪ್ರಬಲ ರಾಜಕೀಯ ಪಕ್ಷವಾಯಿತು. ಸ್ವಾತಂತ್ರ್ಯಾನಂತರದ 15 ಸಾರ್ವತ್ರಿಕ ಚುನಾವಣೆಗಳಲ್ಲಿ ಆರು ಬಾರಿ ಅದು ಸಂಪೂರ್ಣ ಬಹುಮತವನ್ನು ಗಳಿಸಿದೆ ಮತ್ತು ಇತರ ಪಕ್ಷಗಳೊಂದಿಗೆ ಆಡಳಿತಾತ್ಮಕ ಒಕ್ಕೂಟವನ್ನು ನಾಲ್ಕು ಬಾರಿ ಮುನ್ನಡೆಸಿದೆ. ಕೇಂದ್ರ ಸರ್ಕಾರವನ್ನು 49 ವರ್ಷಗಳ ಕಾಲ ನೇತೃತ್ವ ವಹಿಸಿತ್ತು. ಏಳು ಕಾಂಗ್ರೆಸ್ ಪ್ರಧಾನ ಮಂತ್ರಿಗಳು ಸರ್ಕಾರವನ್ನು ಮುನ್ನಡೆಸಿದರು, ಮೊದಲ ಪ್ರಧಾನಿ ಜವಾಹರಲಾಲ್ ನೆಹರುರಿಂದ ಕೊನೆಯ ಪ್ರಧಾನಿ ಮನಮೋಹನ್ ಸಿಂಗ್ ವರೆಗೂ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಭಾರತದಲ್ಲಿ ಎರಡು ಪ್ರಮುಖ ರಾಷ್ಟ್ರವ್ಯಾಪಿ, ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವ ಜತೆಗೆ, ಮನೆ ಮನೆಗೆ ತೆರಳಿ ಯೋಜನೆ ಬಗ್ಗೆ ಪ್ರಚಾರ ಮಾಡುವಂತೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಉಸ್ತುವಾರಿ ಮಮತಾ ಮೂರ್ತಿ ಮಾತನಾಡಿ, ಕಾಂಗ್ರೆಸ್ ಬಿಜೆಪಿಯನ್ನು ಬಗ್ಗು ಬಡಿಯುತ್ತದೆ ಎಂದು ಬಿಜೆಪಿಯವರಿಗೆ ಈಗಾಗಲೇ ಹಿಂಜರಿಕೆ ಶುರುವಾಗಿದೆ. ಬಿಜೆಪಿಯಲ್ಲಿ ಅಭ್ಯರ್ಥಿಗಳ ಬಗ್ಗೆ ಗೊಂದಲವಿದೆ. ಕಾರ್ಯಕರ್ತರು ಸಂಘಟಿತರಾಗಿ ಬೂತ್ ಮಟ್ಟದಿಂದ ಕಾರ್ಯನಿರ್ವಹಿಸಬೇಕು, ಆ ಮೂಲಕ ನಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಕೋನಪಲ್ಲಿ ಕೋದಂಡ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ವಿಜಯ್ ಕುಮಾರ್, ಕಿಸಾನ್ ರಾಮಕೃಷ್ಣಪ್ಪ, ಲಕ್ಷ್ಮಣ್, ಚಂದ್ರಶೇಖರ್, ಶ್ರೀರಾಮ ರೆಡ್ಡಿ, ರಮೇಶ್, ಮಂಜುನಾಥ್, ಅಲ್ಲೂ ಅನಿಲ್, ವೆಂಕಟೇಶ್, ಬಚ್ಚ ರೆಡ್ಡಿ, ಬಿ.ಆರ್.ಗೋವಿಂದಪ್ಪ ಸೇರಿದಂತೆ ಮತ್ತಿತರರು ಇದ್ದರು.
---------ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಅಜಿತ್ ಪ್ರಸಾದ್ ಮಾತನಾಡಿದರು.