ಹಾವೇರಿ: ಜನರ ಅಪೇಕ್ಷೆಯಂತೆ ಕೆಲಸವಾಗಬೇಕು ಹಾಗೂ ಅವರ ಬೇಡಿಕೆ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ 2026-27ನೇ ಸಾಲಿನ ವಾರ್ಷಿಕ ಜಿಲ್ಲಾ ಕರಡು ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರ ಪಾಲ್ಗೊಳ್ಳುವಿಕೆಯಲ್ಲಿ ಕ್ರಿಯಾಯೋಜನೆ ರೂಪಿಸಬೇಕು. ಕಾನೂನು ಪ್ರಕಾರ ಯೋಜನೆಗಳ ಅನುಷ್ಠಾನ ಮಾಡಬೇಕು ಎಂದು ಸಲಹೆ ನೀಡಿದರು.ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‌ವಾರು ಸಭೆ ಮಾಡಬೇಕು. ಇಂದಿಗೂ ಎಷ್ಟೋ ಗ್ರಾಮಗಳಲ್ಲಿ ಸ್ಮಶಾನ ಇಲ್ಲ ಹಾಗೂ ರೈತರಿಗೆ ಹೊಲಗಳಿಂದ ಗ್ರಾಮಕ್ಕೆ ಬರಲು ದಾರಿಗಳಿಲ್ಲ. ಕ್ರಿಯಾಯೋಜನೆ ತಯಾರಿಸುವಾಗ ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸಬೇಕು ಹಾಗೂ ಸ್ಮಶಾನಕ್ಕೆ ಜಾಗ ಹಾಗೂ ಹೊಲಕ್ಕೆ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ ಎಂದರು.
ಗ್ರಾಮ ಸ್ವರಾಜ್ಯ ವ್ಯವಸ್ಥೆ: ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾಪಂ ಹಾಗೂ ಸ್ಥಳೀಯ ನಗರ ಸಂಸ್ಥೆಗಳ ಒಂದು ವಾರ್ಡ್‌ನ ಗಾಂಧೀಜಿ ಅವರ ಕನಸಿನ ಗ್ರಾಮ ಸ್ವರಾಜ್ಯ ವ್ಯವಸ್ಥೆ ಜಾರಿಗೆ ಮುಂಬರುವ ನ. 14ರೊಳಗಾಗಿ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಧಿಕಾರಿಗಳ ಸಭೆ: ಜನರ ಪಾಲ್ಗೊಳ್ಳುವಿಕೆಯಲ್ಲಿ ತಯಾರಿಸಿದ ಕ್ರಿಯಾಯೋಜನೆ ಮಾಹಿತಿಯನ್ನು ನ. 14ರೊಳಗಾಗಿ ಸಲ್ಲಿಸಿದರೆ, ನ. 14 ಅಥವಾ ನ. 15ರಂದು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ಥಳೀಯ ನಗರ ಸಂಸ್ಥೆಯ ಮುಖ್ಯಾಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಡಿ.ಆರ್.ಪಾಟೀಲ್ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಹಾಗೂ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಸ್ಮಶಾನಕ್ಕೆ ಜಾಗ ಗುರುತಿಸಲು ಆದ್ಯತೆ ನೀಡಬೇಕು. ಅಧಿಕಾರಿಗಳು-ಜನ ಪ್ರತಿನಿಧಿಗಳು ಒಟ್ಟಾಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು, ನ. 14ರೊಳಗಾಗಿ ನಗರದ ಒಂದು ವಾರ್ಡ್ ಹಾಗೂ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯಿತಿಗೆ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸುವ ಮಾದರಿ ಜಿಲ್ಲೆ ಮಾಡಲು ಎಲ್ಲರೂ ಶ್ರಮಿಶೋಣ ಎಂದರು.ಜಿಪಂ ಉಪ ಕಾರ್ಯದರ್ಶಿ ಡಾ. ಪುನಿತ್ ಹಾಗೂ ಜಿಪಂ ಯೋಜನಾ ನಿರ್ದೇಶಕ ಎಚ್.ವೈ. ಮೀಶೆ ಮಾತನಾಡಿ, 2026-27ನೇ ಸಾಲಿಗೆ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಯೋಜನೆಗಳನ್ನು ಕೆಳಹಂತದಿಂದ ಅಂದರೆ, ಜನವಸತಿ, ಗ್ರಾಮಸಭೆ, ವಾರ್ಡ್ ಸಭೆ, ಗ್ರಾಮ ಪಂಚಾಯಿತಿ ಸಭೆಗಳಿಂದ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ತಯಾರಿಸಿ ಯೋಜನೆಗಳನ್ನು ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಜಿಲ್ಲಾ ಯೋಜನಾ ಸಮಿತಿ ಮೂಲಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತೋಟಗಾರಿಕೆ, ಕೃಷಿ, ಸಣ್ಣ ನೀರಾವರಿ, ಅರಣ್ಯ ಇಲಾಖೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಯೋಜನೆಗಳ ಮಾಹಿತಿ ನೀಡಿದರು.