ಕೊಪ್ಪಳ: ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕು ನೀಡುವವರೇ ಗುರುಗಳು. ನಮ್ಮ ಭವಿಷ್ಯ ರೂಪಿಸಿದ ಗುರುಗಳಿಗೆ ಒಂದು ಕಡೆ ಸೇರಿಸಬೇಕು, ಗೌರವ ಸಮರ್ಪಿಸಬೇಕು ವಂದನೆ ಸಲ್ಲಿಸಬೇಕು ಎನ್ನುವ ಭಾವ ಅತ್ಯಂತ ಸರಳ ಸಜ್ಜನಿಕೆಯ ಸಾತ್ವಿಕ ಜನರಲ್ಲಿ ಮಾತ್ರ ಬರಲು ಸಾಧ್ಯ ಎಂದು ಪ.ಪೂ ಶಿವರಾಮಕೃಷ್ಣನಂದ ಭಾರತಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಸಮೀಪದ ಭಾಗ್ಯನಗರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ 1987-88 ರಿಂದ 1997- 98 ನೇ ಸಾಲಿನ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೇವೆ. ಹಾಗಾಗಿ ಈ ಸಮಾಜದಿಂದ ಪಡೆದದ್ದನ್ನು ನಾವು ಮತ್ತೆ ಸಮಾಜಕ್ಕೆ ವಾಪಸ್ ನೀಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣ ತೀರಿಸಲೇಬೇಕು. ಸುಮಾರು 30 ವರ್ಷ ನಂತರವೂ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು ಅವರಿಗೆ ವಂದಿಸುವ ಕಾರ್ಯ ಮಾದರಿಯಾಗಿದೆ. ಉಜ್ವಲ ಜೀವನ ನಿರ್ಮಿಸಬೇಕಾದರೆ ಗುರುವಿನ ಉತ್ತಮ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದರು.
ನಿವೃತ್ತ ಹಿರಿಯ ಶಿಕ್ಷಕ ನಿಂಗಪ್ಪ ಮಾತನಾಡಿ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನ ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.ಹಳೆಯ ವಿದ್ಯಾರ್ಥಿಗಳು 30 ವರ್ಷಗಳ ಹಿಂದಿನ ನೆನಪನ್ನು ಮೆಲುಕು ಹಾಕಿದರು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸತ್ಕರಿಸಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಇದ್ದರು.