ರಾಜ್ಯ ಸರ್ಕಾರದಿಂದ ಪೊಲೀಸ್ ಆಡಳಿತ ತರಲು ಪ್ರಯತ್ನ: ಬೊಮ್ಮಾಯಿ ಆರೋಪ

KannadaprabhaNewsNetwork |  
Published : Oct 30, 2025, 02:00 AM IST
29ಎಚ್‌ವಿಆರ್‌1-ಬಸವರಾಜ ಬೊಮ್ಮಾಯ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಸಂವಿಧಾನ ವಿರುದ್ಧ ಹಲವಾರು ಕೃತ್ಯಗಳು ಆಗಿವೆ. ಜನರ ವಾಕ್ ಸ್ವಾತಂತ್ರ್ಯ, ನಾಗರಿಕರ ಹಕ್ಕು ಮೊಟಕುಗೊಳಿಸುವ ಕ್ರಮವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಹಾವೇರಿ: ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತೆತ್ತಿದರೆ ಸಂವಿಧಾನ ರಕ್ಷಣೆಯ ಬಗ್ಗೆ ಹೇಳುತ್ತಾರೆ. ಹಾಗೆ ಹೇಳುತ್ತಲೇ ಸಂವಿಧಾನ ವಿರುದ್ಧವೇ ಕೆಲಸ ಮಾಡುತ್ತಾರೆ. ಆಚಾರ ಹೇಳುವುದು, ತಿನ್ನುವುದು ಬದನೆಕಾಯಿ. ರಾಜ್ಯದಲ್ಲಿ ಪೊಲೀಸ್ ಆಡಳಿತ ತರಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಸಂವಿಧಾನ ವಿರುದ್ಧ ಹಲವಾರು ಕೃತ್ಯಗಳು ಆಗಿವೆ. ಜನರ ವಾಕ್ ಸ್ವಾತಂತ್ರ್ಯ, ನಾಗರಿಕರ ಹಕ್ಕು ಮೊಟಕುಗೊಳಿಸುವ ಕ್ರಮವಾಗುತ್ತಿದೆ. ಆರ್‌ಎಸ್‌ಎಸ್ ವಿರುದ್ಧ ರಾಜ್ಯ ಸರ್ಕಾರ ಮಾಡಿದ್ದ ಆದೇಶ ಸಂವಿಧಾನ ಬಾಹಿರವಾಗಿದೆ ಎಂದು ನಾನು ಹೇಳಿದ್ದೆ, ಅದನ್ನೇ ರಾಜ್ಯ ಹೈಕೋರ್ಟ್ ಧಾರವಾಡ ಪೀಠ ಮಧ್ಯಂತರ ತಡೆ ನೀಡಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ ಇದ್ದರೆ, ಸಂವಿಧಾನದಲ್ಲಿ ನಂಬಿಕೆ ಇದ್ದರೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದರು.

ಸಂವಿಧಾನಕ್ಕೆ ಅಪಚಾರ: ಚುನಾವಣಾ ಆಯೋಗದ ಕುರಿತು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗ ಸಂವಿಧಾನ ಬದ್ಧವಾದ ಸಂಸ್ಥೆ. ಅವರಿಗೆ ಟೀಕೆ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ಇದರ ಅರಿವು ಇಟ್ಟುಕೊಳ್ಳಬೇಕು. ಯಾವ ಚುನಾವಣಾ ಆಯೋಗದ ಮೂಲಕ ಇವರು ಆಯ್ಕೆಯಾಗಿದ್ದಾರೆ. ಅದನ್ನೇ ತಿರಸ್ಕಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ದೇಶದಲ್ಲಿ ಸಂವಿಧಾನಬದ್ಧವಾಗಿ ಸ್ಥಾಪಿತವಾಗಿರುವ ಸಂಸ್ಥೆಯ ಮೇಲೆ ಸಂಶಯ ಮೂಡಿಸಿ, ಅರಾಜಕತೆ ಮೂಡಿಸುವ ಕೆಲಸ ಮಾಡಿ ಕಾಂಗ್ರೆಸ್‌ ದೇಶಕ್ಕೆ ದೊಡ್ಡ ಅಪಚಾರ ಮಾಡುತ್ತಿದೆ ಎಂದು ಹೇಳಿದರು.

ಅಭಿವೃದ್ಧಿ ಶೂನ್ಯ: ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ವಿರುದ್ಧ ಕ್ರಮಕ್ಕೆ ಮುಂದಾಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಶೂನ್ಯವಾಗಿದ್ದು, ಅದನ್ನು ಮುಚ್ಚಿ ಹಾಕಲು ಜನರಿಗೆ ಪ್ರಯೋಜನ ಇಲ್ಲದ ಒಂದಿಲ್ಲೊಂದು ವಿಷಯಗಳನ್ನು ತೆಗೆದುಕೊಂಡು ತಮ್ಮ ವೈಫಲ್ಯ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರದಲ್ಲಿ ನವೆಂಬ‌ರ್ ಕ್ರಾಂತಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಮಧ್ಯ ಏನು ಕ್ರಾಂತಿ ಇದೆಯೋ ಅದು ನನಗೆ ಸಂಬಂಧ ಇಲ್ಲ. ಜನರು ಬಹಳ ಬೇಸತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಜನರು ಈ ರೀತಿಯ ಆಡಳಿತ ನಿರೀಕ್ಷೆ ಮಾಡಿರಲಿಲ್ಲ ಎಂದರು.

ರಸ್ತೆ ಗುಂಡಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ಗುಂಡಿಗಳ ನಿರ್ವಹಣೆಗೂ ಹಣ ಇಲ್ಲ. ಜತೆಗೆ ಮಳೆ ಬೀಳುತ್ತಿದೆ. ಇದರಿಂದ ರಸ್ತೆ ಗುಂಡಿಗಳು ಬಿದ್ದಿವೆ. ಆ ಬಗ್ಗೆ ಚಿಂತನೆ ಮಾಡುವ ಮಂತ್ರಿಗಳು ಇಲ್ಲ. ಮುಖ್ಯಮಂತ್ರಿಯೂ ಇಲ್ಲ. ಹಣ ಇಲ್ಲದ ಕಾರಣ ಎಲ್ಲವೂ ಅಧೋಗತಿಗೆ ಹೋಗಿದೆ ಎಂದು ಹೇಳಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು