ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 45ನೇ ಕರ್ನಾಟಕ ಉತ್ತರ ಪ್ರಾಂತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಸೃಜನಶೀಲ ಚಿಂತನೆಗಳು ಬೆಳವಣಿಗೆಯಾಗಿ ರಾಷ್ಟ್ರೀಯ ವಿಚಾರಗಳಿಂದ ಉತ್ತಮ ನಾಗರಿಕರಾಗುವರು. ಐಐಟಿ, ಎನ್‌ಐಟಿಗಳಿಂದ ಹೊರಬರುವ ಯುವಕರು ನವೋದ್ಯಮ ಪ್ರಾರಂಭಿಸಿ ನಿರುದ್ಯೋಗ ಸಮಸ್ಯೆಗಳನ್ನು ಕಡಿಮೆ ಮಾಡಲು ಸಲಹೆ ನೀಡಿದರು.ಅತಿಥಿ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಅಶೀಶ್ ಚವ್ಹಾಣ ಮಾತನಾಡಿ, ಭಾರತ ದೇಶಕ್ಕೆ ಅಪೂರ್ವದ ಇತಿಹಾಸವಿದೆ. ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ನೌಕಾಯಾನ ಸೇರಿದಂತೆ ಹಲವಾರು ವಿಜ್ಞಾನ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದರು. ಎಲ್ಲ ಕ್ಷೇತ್ರಗಳಲ್ಲಿ ಅಪೂರ್ವವಾದ ಜ್ಞಾನವನ್ನು ನಮಗೆ ನೀಡಿ ಹೋಗಿದ್ದಾರೆ. ಅದನ್ನು ಪುನರ್ ಅಧ್ಯಯನ ಮಾಡುವುದು ಮುಖ್ಯ ಎಂದು ತಿಳಿಸಿದರು.ಕರ್ನಾಟಕ ಉತ್ತರ ಪ್ರಾಂತದ ನೂತನ ಅಧ್ಯಕ್ಷ ಡಾ.ಬಸವರಾಜ ಕುಬಕಡ್ಡಿ ಮಾತನಾಡಿ, ವಿದ್ಯಾರ್ಥಿಗಳು ವ್ಯಕ್ತಿತ್ವ ನಿರ್ಮಾಣದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಜ.24 ರಿಂದ 26 ರವರೆಗೆ ಆಯೋಜಿಸಿದ ಮೂರು ದಿನಗಳ ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ವಿಶ್ವವಿದ್ಯಾಲಯಗಳ ಸ್ಥಿತಿಗತಿ ಕುರಿತು ಚಿಂತನೆ ಮಾಡಿ ಶಿಕ್ಷಣ ವ್ಯಾಪಾರಿಕರಣವಾಗಬಾರದು. ಅದೊಂದು ಸೇವಾ ಕ್ಷೇತ್ರವಾಗಬೇಕು. ಎನ್‌ಇಪಿ ಮತ್ತು ಎಸ್‌ಇಪಿ ಮದ್ಯೆ ಗೊಂದಲ ಸೃಷ್ಟಿಗೆ ಆಸ್ಪದ ನೀಡಬಾರದು ಎಂದರು. ನೂತನವಾಗಿ ಆಯ್ಕೆಯಾದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯದರ್ಶಿ ದರ್ಶನ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುತ್ತ ಶೈಕ್ಷಣಿಕ ನೂನ್ಯತೆಗಳನ್ನು ಸರಿಪಡಿಸುವಂತೆ ಶ್ರಮಿಸಬೇಕು. ಪರಿಸರ ಕಲೆ, ವಿಜ್ಞಾನ ಹೀಗೆ ವಿವಿಧ ಆಯಾಮಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ದೇಶವನ್ನು ವಿಶ್ವಗುರು ಆಗಿಸುವತ್ತ ಪ್ರಯತ್ನಿಸಬೇಕು ಎಂದು ತಿಳಿಸಿದರು.ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷೆ ಡಾ.ಸುಮಾ ಬೋಳರೆಡ್ಡಿ ಅತಿಥಿಗಳನ್ನು ಪರಿಚಯಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ವಿಕಾಸ್ ದರಬಾರ ಅತಿಥಿಗಳನ್ನು ಸ್ವಾಗತಿಸಿದರು. ಉದ್ಯಮಿ ರಾಜು ಬಿಜ್ಜರಗಿ ವಂದಿಸಿದರು.ಆರ್‌ಎಸ್‌ಎಸ್ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ.ಜಿ, ಮಾಜಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ಬಸವರಾಜ ಯಾದವಾಡ, ವಿರೇಶ ಬಾಳಿಕಾಯಿ, ಪ್ರಾಂತ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಡಾಂಗೆ, ಹೆಚ್.ವೆಂಕಟೇಶ, ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ, ಎಸ್.ಎಸ್.ಡೊಂಗರಗಾವಿ, ಉಮೇಶ ಕಾರಜೋಳ, ಡಾ.ಅರವಿಂದ ಪಾಟೀಲ, ಶಾಂತೇಶ ಕಳಸಗೊಂಡ, ಶ್ರೀದೇವಿ ಕಾರಜೋಳ, ಗೋವಿಂದ ಜೋಶಿ, ಶೀಲಾ ಬಿರಾದಾರ, ಅಧ್ಯಾಪಕರುಗಳು ಹಾಗೂ ನೂರಾರು ವಿದ್ಯಾರ್ಥಿ ಕಾರ್ಯಕರ್ತರು ಉಪಸ್ಥಿತರಿದ್ದರು.