ಕನ್ನಡಪ್ರಭ ವಾರ್ತೆ ಪಾವಗಡ
ಕೆಲ ಸ್ಥಳೀಯ ರಾಜಕೀಯ ಪ್ರಭಾವಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮ ಉಲ್ಲಂಘಿಸಿ ನರೇಗಾ ಯೋಜನೆಯ ಲಕ್ಷಾಂತರ ರು. ವೆಚ್ಚದ ಕೆರೆ ಹೊಳೆತ್ತುವ ಕಾಮಗಾರಿಗಳನ್ನು ಜೆಸಿಬಿ ಹಾಗೂ ಟ್ರಾಕ್ಟರ್ ಮೂಲಕ ನಿರ್ವಹಿಸುತ್ತಿದ್ದಾರೆ. ಇದರಿಂದ ನಿತ್ಯ ನೂರಾರು ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಕಾಮಗಾರಿ ತಡೆಯುವಂತೆ ದಾಖಲೆ ಸಮೇತ ತಾಪಂ ಇಒಗೆ ದೂರು ಸಲ್ಲಿಸಿದ್ದರೂ ಕ್ರಮವಹಿಸುತ್ತಿಲ್ಲ ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಮುಖಂಡ ವದನಕಲ್ಲು ನರಸಿಂಹಯ್ಯ ಆರೋಪಿಸಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯನ್ನು ಕೂಲಿಕಾರರಿಂದ ನಿರ್ವಹಿಸುವಂತೆ ಸರ್ಕಾರದ ಆದೇಶವಿದೆ. ಆದರೆ ತಾಲೂಕಿನ ವದನಕಲ್ಲು ಗ್ರಾಪಂನಲ್ಲಿ ಜೆಬಿಸಿ ಹಾಗೂ ಟ್ರಾಕ್ಟರ್ ಮೂಲಕ ಕೆರೆ ಹೊಳೆತ್ತುವ ಕಾಮಗಾರಿ ನಿರ್ವಹಿಸಿ ಬೋಗಸ್ ಬಿಲ್ಲು ಸೃಷ್ಟಿಸುತ್ತಿದ್ದಾರೆ. ಕೂಲಿಕಾರರರಿಂದ ಕೆಲಸ ನಿರ್ವಹಿಸಿರುವುದಾಗಿ ಗ್ರಾಪಂ ಅನ್‌ಲೈನ್‌ನಲ್ಲಿ ದಾಖಲಿಸಿ ಯೋಜನೆಯ ಹಣ ಲಪಟಾಯಿಸಲು ಮುಂದಾಗಿದ್ದಾರೆ. ಇದರಿಂದ ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ. ಗ್ರಾಪಂ ಹಾಗೂ ತಾಪಂ ನರೇಗಾ ಯೋಜನೆಯ ಅಧಿಕಾರಿಗಳ ಶಾಮೀಲಿನೊಂದಿಗೆ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರಿದ್ದಾರೆ.
90 ಲಕ್ಷ ರು. ವಿವಿಧ ಕಾಮಗಾರಿಗಳ ಅನುಮೋದನೆ: ಮಳೆಯ ಅಭಾವದಿಂದ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಡಿಸಿದೆ. ಸರ್ಕಾರದ ಯೋಜನೆ ದುರುಪಯೋಗವಾಗುವ ಕಾರಣ ಬಡವರಿಗೆ ಸೌಲಭ್ಯ ಸಿಗುತ್ತಿಲ್ಲ. ಪ್ರಸಕ್ತ ಸಾಲಿಗೆ ವದನಕಲ್ಲು ಗ್ರಾಪಂನಲ್ಲಿ ನರೇಗಾ ಯೋಜನೆ ಅಡಿ ಸುಮಾರು 90 ಲಕ್ಷ ರು. ವೆಚ್ಚದ ವಿವಿಧ ಕಾಮಗಾರಿಗಳ ಅನುಮೋದನೆ ಪಡೆಯಲಾಗಿದೆ. ಸದರಿ ಗ್ರಾಪಂ ವ್ಯಾಪ್ತಿಯಲ್ಲಿ ಲೇಬರ್ ಕಾರ್ಡ್ ಹೊಂದಿದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಬಳಸದೇ ವದನಕಲ್ಲು ಗ್ರಾಮ ಸರ್ವೆ ನಂ16ರ ಪಂಚ್ಚಕುಂಟೆ, ನಾಗಮ್ಮನಕುಂಟೆ, ಕರ್ಲಕುಂಟೆ, ಲಿಂಗದಹಳ್ಳಿಯ ಬಲುಗಿನ ಕೆರೆ ಹಾಗೂ ಜೂಲಪ್ಪಯನಪಾಳ್ಯದ ಕೊಡೀರಪ್ಪ ಕೆರೆ ಸೇರಿದಂತೆ ಇತರೆ 10 ಕೆರೆಗಳನ್ನು ಸಮಗ್ರ ಕೆರೆ ಅಭಿವೃದ್ಧಿಯ ಹೊಳೆತ್ತುವ ಹಾಗೂ ಗೋಕಟ್ಟೆ ಕಾಮಗಾರಿ ಕೈಗೊಂಡಿದ್ದಾರೆ. ರಾತ್ರೋರಾತ್ರಿ ಜೆಸಿಬಿ ಹಾಗೂ ಟ್ರಾಕ್ಟರ್ ಇತರೆ ಯಂತ್ರೋಪಕರಣಗಳಿಂದ ಕಾಮಗಾರಿ ನಿರ್ವಹಿಸಿ ಲಕ್ಷಾಂತರ ರು.ಲೂಟಿ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ಜನರು ಕೂಲಿ ಕೆಲಸವಿಲ್ಲದೇ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದರು.ಜೆಬಿಸಿ ಹಾಗೂ ಟ್ರಾಕ್ಟರ್ ಮೂಲಕ ಮಾಡುವ ಕಳಪೆ ಕಾಮಗಾರಿ ಕುರಿತು ದಾಖಲೆ ಸಮೇತ ತಾಪಂ ಇಒ ಜಾನಕಿರಾಮ್ ಅವರಿಗೆ ದೂರು ಸಲ್ಲಿಸಿದ್ದೇನೆ. ದೂರು ಸ್ವೀಕರಿಸಿ ಒಂದು ವಾರ ಕಳೆದಿದ್ದರೂ ಇಒ ಕ್ರವಹಿಸಿಲ್ಲ. ಜಿಪಂ ಸಿಇಒಗೆ ದೂರು ಸಲ್ಲಿಸಲಾಗಿದೆ. ಇಂತಹ ಕಾಮಗಾರಿಗಳಿಗೆ ತಡೆಯೊಡ್ಡದಿದ್ದರೆ ಕೂಲಿಕಾರರು ತಾಪಂಗೆ ಮುತ್ತಿಗೆ ಹಾಕಲಿದ್ದೇವೆ. ದಾಖಲೆ ಸಮೇತ ಲೋಕಾಯುಕ್ತರಿಗೆ ದೂರು ಸಲ್ಲಿಸಿ ತನಿಖೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನ ವದನಕಲ್ಲು ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೊಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಕೂಲಿಕಾರರಿಗೆ ಕೆಲಸ ನೀಡಲು ಸೂಚಿಸಲಾಗಿದೆ. ಜೆಸಿಬಿ ಹಾಗೂ ಟ್ರಾಕ್ಟರ್ ಮೂಲಕ ಕೆಲಸ ಮಾಡಲು ಅವಕಾಶವಿಲ್ಲ. ಅಗತ್ಯವಿದ್ದರೆ ಟ್ರಾಕ್ಟರ್ ಬಳಸಬಹುದು. ತಾಪಂಗೆ ದೂರು ಸಲ್ಲಿಸಿರುವ ಬಗ್ಗೆ ನನ್ನಗೆ ಮಾಹಿತಿ ಇಲ್ಲ. ವದನಕಲ್ಲು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ರಂಗನಾಥ್, ತಾಪಂ ನರೇಗಾ ಯೋಜನಾಧಿಕಾರಿ
ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ನಡೆಯುತ್ತಿದ್ದು, ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡುವಂತಿಲ್ಲ. ಪರಿಶೀಲಿಸಿ ಕಾಮಗಾರಿಗೆ ತಡೆ ಹಾಗೂ ಯೋಜನೆಯ ಬಿಲ್ಲು ಪಾಸ್ ಮಾಡಲು ಅವಕಾಶ ನೀಡುವುದಿಲ್ಲ.ಮಹಮೊದ್, ಪಿಡಿಒ ವದನಕಲ್ಲು ಗ್ರಾಪಂ