ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಿ: ರಾಹುಲ್ ರತ್ನಂ ಪಾಂಡೆಯ

KannadaprabhaNewsNetwork |  
Published : Oct 13, 2024, 01:06 AM IST
10ಕೆಪಿಎಲ್21 ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾ ಪಂಚಾಯತನ ಜೆ.ಹೆಚ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ | Kannada Prabha

ಸಾರಾಂಶ

ಮಾನಸಿಕ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದ್ದು, ಎಲ್ಲ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಾನಸಿಕ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದ್ದು, ಎಲ್ಲ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಪಂನ ಜೆ.ಎಚ್. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2024ರ ಮಾನಸಿಕ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನಸಿಕತೆ ಎಂಬುದು ದೊಡ್ಡ ಸಮಸ್ಯೆಯಲ್ಲ, ಇದು ಎಲ್ಲರಲ್ಲೂ ಸಾಮಾನ್ಯವಾಗಿರುತ್ತದೆ. ಆದರೆ, ಮಾನಸಿಕ ಆರೋಗ್ಯದಲ್ಲಿ ನಿರ್ಲಕ್ಷ್ಯ ಬೇಡ. ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಸಹ ಅಷ್ಟೇ ಮುಖ್ಯವಾಗಿದೆ. ಎರಡನ್ನು ಸಮತೋಲನವಾಗಿ ಕಾಪಾಡಿಕೊಂಡು ಹೋಗಬೇಕು. ಮಾನಸಿಕ ಕಾಯಿಲೆಯನ್ನು ನಿರ್ಲಕ್ಷತನ ಮಾಡಬಾರದು. ಪ್ರತಿ ಸಮಸ್ಯೆಗೆ ಪರಿಹಾರ ಇದ್ದೆ ಇರುತ್ತದೆ, ಇನ್ನೊಬ್ಬರ ಜೊತೆ ಹಂಚಿಕೊಳ್ಳಬೇಕು. ಕುಟುಂಬದಲ್ಲಿನ ಸದಸ್ಯರೊಂದಿಗೆ ಪ್ರೀತಿಯಿಂದ ಮಾತನಾಡುವುದರಿಂದ ನೆಮ್ಮದಿ ಜೀವನ ಮತ್ತು ಆರೋಗ್ಯದಿಂದ ಇರಬಹುದು. ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕು. ವೈಯಕ್ತಿಕ ಕೆಲಸ ಮತ್ತು ಕಾರ್ಯ ನಿರ್ವಹಿಸುವಂತಹ ಸ್ಥಳಗಳಲ್ಲಿ ಸರಿಯಾದ ರೀತಿಯಲ್ಲಿ ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಿ. ಯಾವುದೇ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ದರ್ಗದ ಮಾತನಾಡಿ, ಕೆಲಸ ನಿರ್ವಹಿಸುವಂತಹ ಸ್ಥಳದಲ್ಲಿ ಒಳ್ಳೆಯ ವಾತಾವರಣ ಮತ್ತು ಮಾಡುವಂತಹ ಕೆಲಸದಲ್ಲಿ ಪ್ರಾಮಾಣಿಕತೆ, ಶಿಸ್ತು, ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರಲ್ಲಿ ಒಳ್ಳೆಯತನ ಕಾಣುವುದರಿಂದ ನೆಮ್ಮದಿಯ ಜೀವನ ನಡೆಸಬಹುದು. ಮನಸ್ಸು ನಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಯೋಗ, ಧ್ಯಾನ ಮಾಡುವುದು ಸೂಕ್ತವಾಗಿದ್ದು, ಇದರಿಂದ ಉತ್ತಮ ಆರೋಗ್ಯವು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ಮಾತನಾಡಿ, ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಎಲ್ಲರನ್ನೂ ಪರಸ್ಪರ ಗೌರವದಿಂದ ಕಾಣಬೇಕು. ಮೆದುಳಿನಲ್ಲಿರುವ ರಾಸಾಯನಿಕ ಬದಲಾವಣೆ, ಮಾದಕ ವಸ್ತುಗಳಾದ ಗಾಂಜಾ, ಅಫೀಮ್ ಹಾಗೂ ಆಲ್ಕೋಹಾಲು ಸೇವನೆ ಮತ್ತು ಮೆದುಳಿಗೆ ಸಂಬಂಧಿಸಿದ ಸೋಂಕು, ಗಡ್ಡೆ, ಪೆಟ್ಟು, ಕುಟುಂಬ, ಹಣಕಾಸು, ಉದ್ಯೋಗ, ರೀತಿ ನೀತಿಗಳ ಗೊಂದಲಗಳು ಮಾನಸಿಕ ರೋಗಕ್ಕೆ ಮುಖ್ಯ ಕಾರಣ. ಮಾನಸಿಕ ಕಾಯಿಲೆ ಬಗ್ಗೆ ಯಾರು ಕೂಡ ನಿರ್ಲಕ್ಷ್ಯ ಮಾಡಬಾರದು. ಮೊದನೇ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಬಾಳಬೇಕು ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಎಚ್.ಪ್ರಕಾಶ ಮಾತನಾಡಿ, ಪ್ರತಿ ವರ್ಷ ಅ. 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಇದು ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ ಎಂಬುವುದು ಈ ವರ್ಷದ ಘೋಷವಾಕ್ಯವಾಗಿದೆ. ಮಾನಸಿಕ ಕಾಯಿಲೆಗೂ ಒಂದು ಚಿಕಿತ್ಸೆ ಇದೆ, ಮಾನಸಿಕ ಕಾಯಿಲೆಯಿಂದ ಹೊರ ಬರಬೇಕೆಂದರೆ ಒತ್ತಡ ನಿರ್ವಹಣೆ ಮಾಡಬೇಕು. ಈ ಕಾಯಿಲೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯೆ ಡಾ. ಲಕ್ಷ್ಮಿದೇವಿ ಎಂ. ಪಾಟೀಲ ವಿಶೇಷ ಉಪನ್ಯಾಸ ನೀಡಿ, ಕೆಲಸದ ಸ್ಥಳದಲ್ಲಿ ಧನಾತ್ಮಕ ವಾತಾವರಣವು ಅತೀ ಮುಖ್ಯ ಪಾತ್ರವಹಿಸುತ್ತದೆ. ಇದರಿಂದ ಒತ್ತಡ ನಿರ್ವಹಣೆಯು ಸರಳವಾಗುತ್ತದೆ. ವೈಯಕ್ತಿಯ ಕೌಶಲ್ಯ ಅಭಿವೃದ್ಧಿಯು ಕಾರ್ಯಕ್ಷಮತೆಯನ್ನು ಹೆಚ್ಚುಸುವುದರಲ್ಲಿ ಸಹಕಾರಿಯಾಗುತ್ತದೆ. ಪರಸ್ಪರ ವಿಷಯಗಳ ವಿನಿಮಯ ಮಾನಸಿಕ ಗೊಂದಲ ಹಾಗೂ ಒತ್ತಡವನ್ನು ನಿಭಾಯಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ವಿವರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳಾದ ಡಾ. ಪ್ರಕಾಶ ವಿ., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''