ನೀರು ಕುಡಿಯಲು ತೋಟದ ಲೈನ್ ನ ಕೊಠಡಿಯತ್ತ ಹೋಗುವಾಗ ದಿಢೀರ್ ದಾಳಿ
ತಾಲೂಕಿನ ಮರಸಣಿಗೆ ಸಮೀಪದ ಎಸ್ಟೇಟ್‌ವೊಂದರಲ್ಲಿ ಶನಿವಾರ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಕಾಫಿ ತೋಟದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಚೇತನ್ (30) ಕಾಡುಕೋಣ ದಾಳಿಗೆ ಬಲಿಯಾದ ದುರ್ಧೈವಿ. ಹೊರನಾಡು ಗ್ರಾಮದ ಕವನಳ್ಳದ ಮರಸಣಿಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ನೀರು ಕುಡಿಯಲು ತೋಟದ ಲೈನ್ ಮನೆಯಲ್ಲಿರುವ ಅವರದೇ ಕೊಠಡಿಯತ್ತ ಹೋಗುತ್ತಿದ್ದಾಗ ದಿಢೀರ್ ಎದುರಾದ ಕಾಡುಕೋಣ ಚೇತನ್ ಎದೆ ಮತ್ತು ಹೊಟ್ಟೆ ಭಾಗಕ್ಕೆ ಬಲವಾಗಿ ತಿವಿದಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರನ್ನು ತಕ್ಷಣ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ.ಚೇತನ್ ಅವರಿಗೆ ಒಂದೂವರೆ ವರ್ಷದ ಮಗುವಿದೆ. ಪತ್ನಿ ಗರ್ಭಿಣಿಯಾಗಿದ್ದು, ಆತನ ಸಾವಿನಿಂದ ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ತೋಟದ ಮಾಲೀಕರು ₹2 ಲಕ್ಷ ನೆರವು ನೀಡಿ ಮಾನವೀಯತೆ ಮೆರೆದರು. ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್ ಜೈನ್, ಮುಖಂಡರಾದ ವಿಶ್ವನಾಥ್, ಶಾಸಕರ ಆಪ್ತ ಸಹಾಯಕ ಸಂಶುದ್ದೀನ್ ಸ್ಥಳದಲ್ಲಿದ್ದರು. ಭದ್ರತೆ ದೃಷ್ಟಿಯಿಂದ ಕಳಸ ಆಸ್ಪತ್ರೆ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಹಣ ಶಾಶ್ವತ ಪರಿಹಾರವಲ್ಲ
ಈ ಹಿಂದೆ ಅನಾಹುತ ನಡೆದಾಗ ಹೋರಾಟಕ್ಕೆ ಬರುತ್ತಿದ್ದ ರಾಜಕೀಯ ಮುಖಂಡರು, ಈಗ ಒಬ್ಬ ಕಾರ್ಮಿಕನ ಜೀವ ಹೋದಾಗ ಬರದಿರುವುದು ಮೃತರ ಬಂಧುಗಳ ಅಸಮಾಧಾನಕ್ಕೆ ಕಾರಣವಾಯಿತು.