ಕಾಂಗ್ರೆಸ್‌ ಸಭೆಯಲ್ಲಿ ಕಾರ್ಯಕರ್ತರ ಗದ್ದಲ

KannadaprabhaNewsNetwork |  
Published : Mar 21, 2024, 01:03 AM IST
20ಎಚ್‌ವಿಆರ್‌3 | Kannada Prabha

ಸಾರಾಂಶ

ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರು ನೆನಪಾಗುತ್ತಾರೆ. ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮತ್ತ ನೋಡುವುದಿಲ್ಲ ಎಂದು ಕೆಲ ಕಾರ್ಯಕರ್ತರು ಗದ್ದಲ ಎಬ್ಬಿಸಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಚುನಾವಣೆ ಸಂದರ್ಭದಲ್ಲಿ ನಿಮ್ಮ ಪರವಾಗಿ ದುಡಿಯಲು ನಾವು ಬೇಕು. ಗೆದ್ದ ಬಳಿಕ ಕಾರ್ಯಕರ್ತರ ಕಷ್ಟ ಕೇಳಲೂ ನಿಮಗೆ ಸಮಯವಿರುವುದಿಲ್ಲ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನಡೆಯಿತು.

ಇದರಿಂದ ಕೆಲ ಕಾಲ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದಲ್ಲದೇ, ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಇಲ್ಲಿನ ಸಿದ್ದರಾಮೇಶ್ವರ ಕಲ್ಯಾಣಮಂಟಪದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಿರಿಯ ಸಚಿವರಾದ ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಜಿಲ್ಲೆಯ ಶಾಸಕರು, ಪ್ರಮುಖರು ಕಾರ್ಯಕ್ರಮ ಉದ್ಘಾಟಿಸುತ್ತಿದ್ದಂತೆ ಕಾರ್ಯಕರ್ತರು ಎದ್ದು ನಿಂತು ಗದ್ದಲು ಶುರುಮಾಡಿದರು.

ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರು ನೆನಪಾಗುತ್ತಾರೆ. ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮತ್ತ ನೋಡುವುದಿಲ್ಲ ಎಂದು ಕೆಲ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ಶಾಸಕ ಬಸವರಾಜ ಶಿವಣ್ಣನವರ ಆಕ್ರೋಶಿತ ಕಾರ್ಯಕರ್ತರನ್ನು ಸಮಾಧಾನ ಮಾಡಲು ಯತ್ನಿಸಿದರೂ ಸಮಾಧಾನಗೊಳ್ಳದ ಕಾರ್ಯಕರ್ತರು ವೇದಿಕೆ ಏರಿದರು. ಆಗ ಎರಡು ಗುಂಪುಗಳ ನಡುವೆ ಗಲಾಟೆ ಮತ್ತಷ್ಟು ಜೋರಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಿರುಗಿತು. ಆಗ ಗಲಾಟೆಯ ದೃಶ್ಯ ಸೆರೆ ಹಿಡಿಯುತ್ತಿದ್ದ ಮಾಧ್ಯಮದವರೊಂದಿಗೆ ಚಿತ್ರೀಕರಣ ಮಾಡದಂತೆ ಮತ್ತೊಂದು ಗುಂಪು ವಾಗ್ವಾದಕ್ಕಿಳಿಯಿತು. ಹೀಗಾಗಿ ಸಭೆ ಆರಂಭದಲ್ಲೇ ಗೊಂದಲದ ಗೂಡಾಯಿತು. ಸ್ವತಃ ಸಚಿವ ಎಚ್.ಕೆ. ಪಾಟೀಲ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಸುಧಾರಿಸಲು ಹೋದರೂ ಕಾರ್ಯಕರ್ತರ ಗಲಾಟೆ ತಣ್ಣಗಾಗಲಿಲ್ಲ, ಗಲಾಟೆ ನಡುವೆಯೇ ಎಚ್.ಕೆ. ಪಾಟೀಲರು ಮಾತು ಆರಂಭಿಸಿದರು. ಬಳಿಕ ಗಲಾಟೆ ನಿಧಾನವಾಗಿ ತಣ್ಣಗಾಯಿತು.

ಭಿನ್ನಾಭಿಪ್ರಾಯ ಮರೆಯಿರಿ

ನಿಮ್ಮ ಏನೇ ಸಮಸ್ಯೆಗಳಿದ್ದರೂ ಚುನಾವಣೆ ಬಳಿಕ ಕುಳಿತು ಮಾತಾಡಿಕೊಂಡು ಬಗೆಹರಿಸಿಕೊಳ್ಳೋಣ. ಚುನಾವಣೆ ಹೊತ್ತಿನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಎತ್ತಿ ತೋರಿಸೋದು ಬೇಡ. ಏನೇ ಭಿನ್ನಾಭಿಪ್ರಾಯ ಇದ್ದರೂ ಮರೆತು ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಿ.

ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ