ದೊಡ್ಡಬಳ್ಳಾಪುರ: ಕಾರ್ಮಿಕ ವಲಯಕ್ಕೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯದ ಎಲ್ಲಾ ಶಾಸಕರ ಮನೆ ಎದುರು ಸೆ.24 ರಿಂದ 26ರವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ ತಿಳಿಸಿದರು.
ಅದೇ ರೀತಿ, ಪೌರಾಡಳಿತ ನಿರ್ದೇಶನಾಲಯ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ಹಳೆಯ ವೇತನ ಮಾತ್ರ ಪಾವತಿಸುವಂತೆ ನಿರ್ದೇಶಿಸಿತು. ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಎಲ್ಲಾ ಗ್ರಾಪಂಗಳು ಹಣಕಾಸು ಇಲಾಖೆಯಿಂದ ಮುಂದಿನ ಆದೇಶಗಳವರೆಗೆ ಪೂರ್ವ-ಪರಿಷ್ಕೃತ ಹಳೆಯ ವೇತನ ಮಾತ್ರ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿದೆ. ಈ ಸುತ್ತೋಲೆಗಳು ಕಾನೂನುಬಾಹಿರವಾಗಿದ್ದು ಮತ್ತು ಕಾರ್ಮಿಕರಿಂದ ಪರಿಷ್ಕೃತ ಹೊಸ ಕನಿಷ್ಠ ವೇತನ ಕಸಿದುಕೊಳ್ಳುವುದಾಗಿದೆ ಎಂದು ಆರೋಪಿಸಿದರು.
ಇದರ ವಿರುದ್ದ ಸಿಐಟಿಯು ರಾಜ್ಯ ಸಮಿತಿ ಇತರೆ ಕಾರ್ಮಿಕ ಸಂಘಟನೆಗಳೊಂದಿಗೆ ಸೇರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಕಳೆದ ಶುಕ್ರವಾರ ವಿಷಯವನ್ನು ವಿಚಾರಣೆಗೆ ತೆಗೆದು ಕೊಂಡ ನ್ಯಾಯಾಲಯ, ಪರಿಷ್ಕೃತ ಕನಿಷ್ಠ ವೇತನ ಪಾವತಿಯನ್ನು ಸ್ಥಗಿತಗೊಳಿಸಿದ ಸುತ್ತೋಲೆಗಳಿಗೆ ತಡೆ ಆಜ್ಞೆ ನೀಡಿ ಮಧ್ಯಂತರ ಆದೇಶವನ್ನು ನೀಡಿದೆ. ಇಂದು ಮತ್ತೆ ವಿಚಾರಣೆ ಮುಂದುವರಿಯಲಿದೆ ಎಂದು ವಿವರಿಸಿದರು.ಪರಿಷ್ಕೃತ ಕನಿಷ್ಠ ವೇತನ ಜಾರಿ ವಿಚಾರದಲ್ಲಿ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಕಾರ್ಮಿಕರ ಹಿತ ರಕ್ಷಣೆಗಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲ ಮುರಳೀಧರ ಪೇಶ್ವಾ ಸೇರಿದಂತೆ ಎಲ್ಲಾ ವಕೀಲರಿಗೆ ಸಿಐಟಿಯು ರಾಜ್ಯ ಸಮಿತಿ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಬಾಕ್ಸ್..........
ಸೆ.24ರಿಂದ 26ರವರೆಗೆ ರಾಜ್ಯದ ಎಲ್ಲಾ ಶಾಸಕರ ಕಚೇರಿ, ಮನೆ ಮುಂದೆ ಪ್ರತಿಭಟನೆ ನಡೆಸುವ ಮೂಲಕ, ಕನಿಷ್ಠ ವೇತನದ ಜಾರಿಗೆ ಒತ್ತಾಯಿಸಲು ಸಿಐಟಿಯು ತೀರ್ಮಾನಿಸಿದೆ. ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆಗಳು ನಡೆಯಲಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಶ್ರಮಜೀವಿಗಳ ಪಾಲಿಗೆ ಗ್ಯಾರಂಟಿ ಸರ್ಕಾರವಾಗಿ ಉಳಿದಿಲ್ಲ ಎಂದು ಆರೋಪಿಸಿದರು.
ದೊಡ್ಡಬಳ್ಳಾಪುರದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.