ಅಪಘಾತದಲ್ಲಿ ಸಾವಿಗೀಡಾಗಿ 4 ತಿಂಗಳಾದ್ರೂ ಕಾರ್ಮಿಕರ ಕುಟುಂಬಕ್ಕೆ ಸಿಗದ ಪರಿಹಾರಧನ

KannadaprabhaNewsNetwork |  
Published : May 18, 2026, 03:30 AM IST
ರಸ್ತೆ ಅಪಘಾತದಲ್ಲಿ ಮೃತಪಟ್ಟ ಗಜೇಂದ್ರಗಡ ಶಿವಾಜಿಪೇಟೆ ಮಹಿಳಾ ಕೂಲಿಕಾರ್ಮಿಕರು | Kannada Prabha

ಸಾರಾಂಶ

ರೋಣ ಸಮೀಪದ ಜಿಗಳೂರು ಗ್ರಾಮದ ಬಳಿ ಫೆಬ್ರವರಿ 5ರಂದು ನಸುಕಿನ ಜಾವ ಕಡಲೆ ಕೀಳಲು ಕೂಲಿ ಕೆಲಸಕ್ಕೆ ತೆರಳಿದ್ದ ಪಟ್ಟಣದ ಶಿವಾಜಿಪೇಟೆಯ ಮೂವರು ಕೂಲಿ ಕಾರ್ಮಿಕರು ಅಪಘಾತದಲ್ಲಿ ಕೊನೆಯುಸಿರು ಎಳೆದರು. ಅಲ್ಲದೇ ೧೫ ಮಹಿಳಾ ಕೂಲಿ ಕಾರ್ಮಿಕರು ಗಾಯಗೊಂಡಿದ್ದರು.

ಎಸ್.ಎಂ. ಸೈಯದ್ಗಜೇಂದ್ರಗಡ: ಕೂಲಿ ಮಾಡಿದರೆ ಹೊಟ್ಟೆಗೆ ಹಿಟ್ಟು ಸಿಗುತ್ತದೆ ಎಂದು ₹೨೦೦ ಕೂಲಿಗಾಗಿ ತೆರಳಿದ್ದ ಮೂವರು ಕಾರ್ಮಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟು ೪ ತಿಂಗಳಾದರೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಪರಿಣಾಮ ಮನೆಗೆ ಆಧಾರಸ್ತಂಭ ಕಳೆದುಕೊಂಡ ಕುಟುಂಬಸ್ಥರು ಅಕ್ಷರಶಃ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದು, ಸಕಾಲದಲ್ಲಿ ಪರಿಹಾರ ಕೊಡಿಸದ ಆಡಳಿತ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗಿದೆ.

ರೋಣ ಸಮೀಪದ ಜಿಗಳೂರು ಗ್ರಾಮದ ಬಳಿ ಫೆಬ್ರವರಿ 5ರಂದು ನಸುಕಿನ ಜಾವ ಕಡಲೆ ಕೀಳಲು ಕೂಲಿ ಕೆಲಸಕ್ಕೆ ತೆರಳಿದ್ದ ಪಟ್ಟಣದ ಶಿವಾಜಿಪೇಟೆಯ ಮೂವರು ಕೂಲಿ ಕಾರ್ಮಿಕರು ಅಪಘಾತದಲ್ಲಿ ಕೊನೆಯುಸಿರು ಎಳೆದರು. ಅಲ್ಲದೇ ೧೫ ಮಹಿಳಾ ಕೂಲಿ ಕಾರ್ಮಿಕರು ಗಾಯಗೊಂಡಿದ್ದರು.

ಆದರೆ ಮೃತ ಕುಟುಂಬಗಳಿಗೆ ತಾಲೂಕಾಡಳಿತ ಈ ವರೆಗೂ ಪರಿಹಾರ ಕೊಡಿಸಲು ಸಫಲವಾಗಿಲ್ಲ. ಪರಿಣಾಮ ಕೂಲಿ ಕಾರ್ಮಿಕರ ದಾರುಣ ಸಾವಿಗೆ ಮಮ್ಮಲ ಮರುಗಿ, ಬಡ ಕಾರ್ಮಿಕರಿಗೆ ಹೀಗಾಗಬಾರದಿತ್ತು ಎಂದು ಕಣ್ಣೀರು ಹಾಕಿದ್ದ ಜನರು ಕಾರ್ಮಿಕರಿಗೆ ಸರ್ಕಾರ ಸಕಾಲದಲ್ಲಿ ಪರಿಹಾರ ನೀಡದ್ದು ದುರ್ದೈವ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅಪಘಾತವಾದ ಆನಂತರ ಶಾಸಕ ಜಿ.ಎಸ್. ಪಾಟೀಲ ಅವರು ಮೃತ ಕುಟುಂಬಗಳ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತಪಟ್ಟ ಕುಟುಂಬದವರಿಗೆ ತಲಾ ₹೨ ಲಕ್ಷ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಜತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಜಿಮ್ಸ್ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದರು.

ಆಗ ಸ್ಥಳೀಯರು ಕನಿಷ್ಠ ₹೫ ಲಕ್ಷ ಪರಿಹಾರ ಕೊಡಿಸುವಂತೆ ಆಗ್ರಹಿಸಿದ್ದಾಗ ಶಾಸಕರು, ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಕೆಲವು ದಿನಗಳಲ್ಲಿ ಪರಿಹಾರ ಸಿಗುತ್ತದೆ ಎಂದು ನೆರೆದಿದ್ದವರು ಹೇಳಿದ್ದರಿಂದ ಅಪಘಾತದಲ್ಲಿ ಮೃತಪಟ್ಟವರ ಅಗತ್ಯ ದಾಖಲೆಗಳನ್ನು ಕುಟುಂಬಸ್ಥರು ತಹಸೀಲ್ದಾರ್ ಕಚೇರಿಗೆ ತಲುಪಿಸಿದ್ದರು.

ಅಪಘಾತವಾಗಿ 4 ತಿಂಗಳಾದರೂ ಪರಿಹಾರ ಸಿಗದೇ ಕುಟುಂಬದ ಸದಸ್ಯರು ನಿತ್ಯವೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಇನ್ನಾದರೂ ತಾಲೂಕಾಡಳಿತ ಕುಟುಂಬಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಲು ಮುಂದಾಗಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ತಾಯಿ ಬದುಕಿದ್ದರೆ ಕಾಲೇಜಿಗೆ ಹೋಗುತ್ತಿದ್ದೆ...

ಜಿಗಳೂರು ಬಳಿ ನಡೆದ ಅಪಘಾತದಲ್ಲಿ ಪಟ್ಟಣದ ಶಿವಾಜಿಪೇಟೆಯ ಅನ್ನಪೂರ್ಣಾ ಚಂಗಳಿ ಅಸು ನೀಗಿದ್ದರಿಂದ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೃತರ ಮಗ ಚಂದ್ರು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದು, ಹಣದ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಿ ಖಾಸಗಿ ಶೋರ್ಂನಲ್ಲಿ ಕೆಲಸ ಮಾಡುತ್ತಿದ್ದಾನೆ. ತಾಯಿ ಬದುಕಿದ್ದರೆ ನಾನು ಕಾಲೇಜಿಗೆ ಹೋಗುತ್ತಿದ್ದೆ. ಮನೆಯಲ್ಲಿ ಸಹ ಇತರರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇವು ಎಂದು ಮಾತನಾಡುವಾಗ ಕಣ್ಣಂಚಲ್ಲಿ ನೀರು ಜಿನುಗಿತು.

ಪರಿಹಾರ ಸಿಕ್ಕರೆ ಅನುಕೂಲ: ಘಟನೆಯಲ್ಲಿ ಮೃತಪಟ್ಟ ಮರಿಯುಂಬಿ ಹುನಗುಂದ ಅವರ ಮನೆಯಲ್ಲಿ ೪ ಜನರಿದ್ದು, ನಮಗೆ ಕಷ್ಟ ಎಂದೂ ತಿಳಿದಿರಲಿಲ್ಲ. ನಮ್ಮ ತಂದೆ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಿದ್ದರಿಂದ ನಮ್ಮವ್ವ ಬೇರೆಯವರ ಮನೆಯಲ್ಲಿ ಮುಸುರಿ- ಕಸ ಸ್ವಚ್ಛ ಮಾಡಿ ನಮ್ಮನ್ನು ಬೆಳೆಸಿದ್ದರು. ಅವರು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಪರಿಹಾರ ಸಿಕ್ಕರೆ ಅನುಕೂಲವಾಗಲಿದೆ ಎಂದು ಅವರ ಮಗ ಮೆಹಬೂಬ ಹುನಗುಂದ ಅಸಹಾಯಕತೆ ವ್ಯಕ್ತಪಡಿಸಿದರು.

ಮನೆ ನಡೆಸುವುದು ಕಷ್ಟ: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು, ಪತಿಗೆ ಆರೋಗ್ಯ ಸರಿ ಇಲ್ಲವೆಂದು ಮನೆಯ ಜವಾಬ್ದಾರಿ ಹೊತ್ತು ಕೂಲಿ ಕೆಲಸಕ್ಕೆ ತೆರಳಿದ್ದ ಸುಜಾತಾ ಹೊಸಮನಿ ಸಹ ಘಟನೆಯಲ್ಲಿ ಕೊನೆಯುಸಿರೆಳೆದ ಪರಿಣಾಮ ಶಾಲೆಗೆ ಹೋಗುತ್ತಿದ್ದ ಮಗ ಎಸ್‌ಎಸ್‌ಎಲ್‌ಸಿ ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದಾನೆ. ನನ್ನ ಆರೋಗ್ಯ ಸರಿ ಇಲ್ಲದ್ದರಿಂದ ಮನೆ ನಡೆಸುವುದು ಸಹ ಕಷ್ಟಸಾಧ್ಯವಾಗಿದೆ. ಹೀಗಾಗಿ ಕುಟುಂಬಕ್ಕೆ ಪರಿಹಾರ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ರಾಚಪ್ಪ ಹೊಸಮನಿ ತಿಳಿಸಿದರು.

ಪರಿಹಾರ ಕೊಡಿಸಲಿ: ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಮುಖ್ಯಮಂತ್ರಿಗಳಿಂದ ₹೨ ಲಕ್ಷ ಕೊಡಿಸುವ ಪರಿಹಾರದ ಭರವಸೆ ನೀಡಿದ್ದ ಶಾಸಕರು ಈ ವರೆಗೂ ಕುಟುಂಬಕ್ಕೆ ತಲುಪಿಸದ್ದು ವಿಪರ್ಯಾಸ. ಇಂತಹ ಘಟನೆಗಳಲ್ಲಿ ತಕ್ಷಣ ಪರಿಹಾರ ದೊರಕಬೇಕು. ಮಾನವೀಯ ನೆಲೆಯಲ್ಲಿ ಶೀಘ್ರದಲ್ಲೇ ಕನಿಷ್ಠ ₹೫ ಲಕ್ಷ ಪರಿಹಾರ ಕೊಡಿಸಲು ಶಾಸಕರು ಮುಂದಾಗಬೇಕು ಎಂದು ಮುಖಂಡ ಎಂ.ಎಸ್. ಹಡಪದ ತಿಳಿಸಿದರು.

ಶೀಘ್ರ ಪರಿಹಾರ: ಜಿಗಳೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪಟ್ಟಣದ ಶಿವಾಜಿಪೇಟೆಯ ೩ ಕೂಲಿ ಕಾರ್ಮಿಕರು ಕುಟುಂಬಸ್ಥರು ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದ್ದ ದಾಖಲೆಗಳು ಪೂರ್ಣವಾಗಿರದ ಹಿನ್ನೆಲೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ರವಾನಿಸಲಾಗಿದೆ. ಶೀಘ್ರದಲ್ಲೇ ಮೃತ ಕುಟುಂಬಗಳಿಗೆ ಪರಿಹಾರ ತಲುಪಲಿದೆ ಎಂದು ಪುರಸಭೆ ಮಾಜಿ ಸದಸ್ಯ ಶಿವರಾಜ ಘೋರ್ಪಡೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀನಕೆರೆ ಗ್ರಾಮದಲ್ಲಿ 3 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ
ಡೆಂಘೀ, ಮಲೇರಿಯಾ ಮುಕ್ತ ಜಿಲ್ಲೆಯಾಗಲು ಶ್ರಮಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ