ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸ್ವೀಕರಿಸುವುದಕ್ಕೆ ವಿಳಂಬ ನೀತಿ ಅನುಸರಿಸುವುದ ವಿರೋಧಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಸೌಲಭ್ಯಗಳನ್ನು ಪಡೆಯಲು ಕೂಡಲೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಬೇಕು. ಮೇ 30ಕ್ಕೆ ಮುಕ್ತಾಯಗೊಂಡಿರುವ ಕಾರ್ಮಿಕ ಮಕ್ಕಳ ಶೈಕ್ಷಣಿಕ ಅರ್ಜಿಗಳ ಸ್ವೀಕಾರವನ್ನು ಆ.31 ರತನಕ ವಿಸ್ತರಿಸಬೇಕು. 2023ರ ಅಧಿಸೂಚನೆಯನ್ನು ರದ್ದುಪಡಿಸಿ 2021 ರ ಅಧಿಸೂಚನೆ ಅನ್ವಯ ಶೈಕ್ಷಣಿಕ ಧನ ಸಹಾಯ ನೀಡಬೇಕು.
ಹೊಸದಾಗಿ ಅರ್ಜಿ ಸಲ್ಲಿಸುವುದು ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಹೈಕೋರ್ಟ್‍ನ ಮಧ್ಯಂತರ ಆದೇಶದನ್ವಯ ಅಮೃತ ಹಾಗೂ ಅಕ್ಷತ ಎನ್ನುವ ವಿದ್ಯಾರ್ಥಿನಿಯರಿಗೆ ದಂಡ ಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು. ಎಲ್ಲಾ ರೀತಿಯ ಖರೀಧಿಗಳನ್ನು ನಿಲ್ಲಿಸಿ ಜಾರಿಯಲ್ಲಿರುವ ಸೌಲಭ್ಯಗಳ ಧನಸಹಾಯವನ್ನು ನೇರ ವರ್ಗಾವಣೆ ಮೂಲಕ ಪಾವತಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್, ಬಿ.ಕೆ.ನಾಗರಾಜಚಾರಿ, ಮಂಜುನಾಥ, ಮಹಮದ್ ಜಿಕ್ರಿಯಾವುಲ್ಲಾ, ರಾಘವೇಂದ್ರ, ಅಬ್ದುಲ್ಲಾ, ರಶೀದ್, ಉಮೇಶ್, ಶೇಖ್‍ಕಲೀಂವುಲ್ಲಾ, ಕೆ.ಎನ್.ನಾಗರಾಜ್, ಸೈಯದ್ ಮುಜ್ಜು ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.